ಕರ್ನಾಟಕ

karnataka

ETV Bharat / state

ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿದ ಭೀಮೆಯ ಒಡಲು: ಸಂಕಷ್ಟದಲ್ಲಿ ರೈತರು - ಬೇಸಿಗೆ ಆರಂಭಕ್ಕೂ ಮುನ್ನವೇ ಬತ್ತಿದ ಭೀಮೆಯ ಒಡಲು

ಪ್ರತಿವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೆಳೆ ಉಳಿಸಿಕೊಳ್ಳಲು ಇಲ್ಲಿನ ರೈತರು ಪಡುವ ಪಾಡು ಬಲು ಕಷ್ಟಕರ. ಈ ಬಾರಿಯೂ ಫೆಬ್ರವರಿಯಲ್ಲಿಯೇ ಭೀಮಾ ನದಿ ಬತ್ತಿದೆ. ದಸೂರ, ಗೋವಿಂದಪುರ, ಉಮರಜ, ಹೊಳಿಸಂಖ, ಉಮರಾಣಿ ಮುಂತಾದ ಗ್ರಾಮಗಳಲ್ಲಿ ರೈತರು ನದಿಯ ಒಡಲಿನಲ್ಲಿಯೇ ಸಿಮೆಂಟಿನ ರಿಂಗ್‌ಗಳನ್ನು ಬಳಸಿ ಗುಂಡಿಗಳನ್ನು ತೋಡಿ ಸಿಗುವ ಅಲ್ಪಸ್ವಲ್ಪ ನೀರನ್ನು ಕೃಷಿಗೆ, ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದಾರೆ..

ಬತ್ತಿದ ಭೀಮೆಯ ಒಡಲು
ಬತ್ತಿದ ಭೀಮೆಯ ಒಡಲು

By

Published : Feb 23, 2022, 6:52 PM IST

Updated : Feb 23, 2022, 8:06 PM IST

ವಿಜಯಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಭೀಮಾ ನದಿ ಬತ್ತಿದೆ. ಇದನ್ನೇ ನಂಬಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ಉಳಿಸಿಕೊಳ್ಳಲು ಅನ್ನದಾತ ಹರಸಾಹಸ ಪಡುತ್ತಿದ್ದಾನೆ.

ರೈತರು ಭೀಮಾನದಿ ತಡದಲ್ಲಿ ಸಾವಿರಾರು ರೂ. ಖರ್ಚು ಮಾಡಿ ಗುಂಡಿ ತೋಡುತ್ತಿದ್ದಾರೆ. ಆ ಮೂಲಕ ಪಂಪ್ ಸೆಟ್​​ನಿಂದ ಅಲ್ಪಸ್ವಲ್ಪ ನೀರನ್ನು ತೆಗೆದು ಬೆಳೆಗಳಿಗೆ ಉಣಿಸುತ್ತಿದ್ದಾರೆ. ಭೀಮಾನದಿಯಲ್ಲಿ ಪ್ರತಿವರ್ಷ ಬೇಸಿಗೆ ಬರುವ ಮುನ್ನ ನೀರು ಇಂಗಿ ಹೋಗುವ ಕಾರಣ, ಬೇಸಿಗೆ ಕಾಲದಲ್ಲಿ ಜನ ಜಾನುವಾರುಗಳಿಗೂ ಕುಡಿಯಲು ನೀರು ಸಿಗುವುದಿಲ್ಲ. ಇನ್ನೂ ಬೆಳೆದ ಬೆಳೆಗೆ ನೀರು ಉಣಿಸಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ, ಕುಣಿ (ಗುಂಡಿ) ತೋಡಿ ಅಲ್ಲಿಂದ ನೀರು ಪಡೆಯಲು ಅನ್ನದಾತ ಪ್ರಯತ್ನಿಸುತ್ತಾನೆ.

ಬತ್ತಿದ ಭೀಮೆಯ ಒಡಲು

ಆದರೆ, ಬತ್ತಿ ಹೋಗಿರುವ ನದಿಯಿಂದ ಎಷ್ಟೇ ಕುಣಿ ತೋಡಿದರೂ ನೀರು ದೊರೆಯುವುದು ತುಂಬ ವಿರಳವೇ ಸರಿ. ಆದರೂ ರೈತರು ಒಂದು ಕುಣಿಗೆ 20-25 ಸಾವಿರ ರೂ. ಖರ್ಚು ಮಾಡಿ ತೋಡಿಸುತ್ತಾರೆ. ಇದರಿಂದ ಸಿಕ್ಕಷ್ಟು ನೀರು ಪಡೆದು ಹೊಲಗಳಿಗೆ ಪಂಪ್ ಸೆಟ್ ಮೂಲಕ ನೀರು ಬೀಡುತ್ತಾರೆ. ಈ ವೇಳೆ ಏನಾದರೂ ಮಳೆ ಬಂದರೆ ಸಾಕು ತೋಡಿದ ಕುಣಿ ಮುಚ್ಚಿ ಹೋಗಿ ಹಾಕಿದ ಹಣ ಪೋಲಾಗುವ ಸಾಧ್ಯತೆಗಳು ಸಹ ಇರುತ್ತವೆ. ಹೀಗಾಗಿ, ಅನ್ನದಾತ ಕುಣಿ ತೋಡಲು ಹಿಂದೇಟು ಹಾಕುವುದು ಉಂಟು.

ಪ್ರತಿವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೆಳೆ ಉಳಿಸಿಕೊಳ್ಳಲು ಇಲ್ಲಿನ ರೈತರು ಪಡುವ ಪಾಡು ಬಲು ಕಷ್ಟಕರ. ಈ ಬಾರಿಯೂ ಫೆಬ್ರವರಿಯಲ್ಲಿಯೇ ಭೀಮಾ ನದಿ ಬತ್ತಿದೆ. ದಸೂರ, ಗೋವಿಂದಪುರ, ಉಮರಜ, ಹೊಳಿಸಂಖ, ಉಮರಾಣಿ ಮುಂತಾದ ಗ್ರಾಮಗಳಲ್ಲಿ ರೈತರು ನದಿಯ ಒಡಲಿನಲ್ಲಿಯೇ ಸಿಮೆಂಟಿನ ರಿಂಗ್‌ಗಳನ್ನು ಬಳಸಿ ಗುಂಡಿಗಳನ್ನು ತೋಡಿ ಸಿಗುವ ಅಲ್ಪಸ್ವಲ್ಪ ನೀರನ್ನು ಕೃಷಿಗೆ, ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದಾರೆ.

ಈಗಾಗಲೇ ನಾಟಿ ಮಾಡಿರುವ ಕಬ್ಬು, ತೋಟದಲ್ಲಿರುವ ಬಾಳೆಗಿಡಗಳು ಮತ್ತು ಇತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಜೀವಜಲ ಬೇಕೇಬೇಕು. ಬೇಸಿಗೆಯಲ್ಲಿ ಹೀಗೆ ತೋಡಲಾಗಿರುವ ಗುಂಡಿಗಳು ನದಿಯಲ್ಲಿ ನೀರು ಬಂದಾಗ ಮರಳಿನಲ್ಲಿ ಮುಚ್ಚಿ ಹೋಗುತ್ತವೆ. ಅಲ್ಲದೇ, ಬಹುತೇಕ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡೂ ಹೋಗುತ್ತವೆ. ಪ್ರತಿವರ್ಷ ಈ ಕುಣಿಗಳಿಗೆ ಹಾಕುವ ದುಡ್ಡು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ ಅಂತಾರೆ ರೈತ ಅಪ್ಪು ಚಿಂಚೋಳಿ ಮತ್ತು ನಾಗರಾಜ ಕಾಂಬಳೆ.

ಇದನ್ನೂ ಓದಿ : ಕಬ್ಬಿಣದ ಸರಪಳಿ ತುಂಡು ಮಾಡಿ, ಕೈಕಾಲಿಗೆ ಸಲಾಕೆ ಚುಚ್ಚಿಕೊಳ್ಳುವ ಗೊರವಯ್ಯ: ಇದು ಮೈಲಾರಲಿಂಗನ ಪವಾಡವಂತೆ!

ಹಗಲು ಹೊತ್ತಿನಲ್ಲಿ ಮೂರು ಗಂಟೆ ತ್ರಿಫೇಸ್ ವಿದ್ಯುತ್ ಇರುತ್ತದೆ. ರಾತ್ರಿ ವೇಳೆಯೂ ಮೂರು ಗಂಟೆ ವಿದ್ಯುತ್ ಸರಬರಾಜು ಇರುತ್ತದೆ. ಆದರೆ, ಈ ವಿದ್ಯುತ್​ಗಾಗಿ ನಿಗದಿತ ಸಮಯಕ್ಕೆ ಪ್ರತಿದಿನ ಕಾಯಲೇಬೇಕು. ಈ ವಿದ್ಯುತ್ ಸರಬರಾಜು ಸಮಯದಲ್ಲಿ ಬೇರೆ ಕೆಲಸಗಳಿದ್ದರೆ ಹೋಗುವಂತಿಲ್ಲ. ಒಂದು ವೇಳೆ ಹೋದರೆ, ಆ ಸಮಯದಲ್ಲಿ ತೋಟದಲ್ಲಿ ಯಾರಿಗಾದರೂ ನೀರುಣಿಸುವ ಜವಾಬ್ದಾರಿವಹಿಸಿ ಹೋಗಬೇಕು. ಇಲ್ಲಿದಿದ್ದರೆ, ಆ ದಿನ ಕೃಷಿ ಬೆಳೆಗಳಿಗೆ ನೀರುಣಿಸುವುದು ತಪ್ಪಿ ಹೋಗುತ್ತದೆ ಎಂದು ರೈತ ಪ್ರದೀಪ ಚಿಂಚಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಭೀಮಾ ನದಿಯಲ್ಲಿ ಸದಾ ನೈಸರ್ಗಿಕ ಹರಿವು ಕಾಪಾಡಬೇಕು. ಪ್ರಾಣಿ, ಪಕ್ಷಿಗಳಿಗೆ ಬದುಕಲು ನೀರು ಅನಿವಾರ್ಯವಾಗಿದೆ ಎಂಬುದು ಪ್ರತಿಯೊಬ್ಬರಿಗೂ ಮನದಟ್ಟಾಗುವ ವಿಚಾರ. ಈ ಭೀಮೆಯಲ್ಲಿ ನೀರು ಹರಿಯಬೇಕೆಂದರೆ ಮೇಲ್ಭಾಗ ಅಂದರೆ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿರಬೇಕು. ಅಲ್ಲದೇ, ಅಲ್ಲಿರುವ ಉಜನಿ ಜಲಾಶಯದಿಂದ ನೀರು ಬಿಡುಗಡೆಯಾಗಬೇಕು.

ಪ್ರತಿವರ್ಷ ಉಂಟಾಗುವ ಈ ನೀರಿನ ತಾಪತ್ರಯ ತಪ್ಪಿಸಲು ಕರ್ನಾಟಕ ಸರ್ಕಾರ ನೆರೆಯ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಭೀಮಾ ತೀರದ ಮಣ್ಣಿನ ಮಕ್ಕಳ ನ್ಯಾಯೋಚಿತ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತುರ್ತಾಗಿ ಮಹಾರಾಷ್ಟ್ರದೊಂದಿಗೆ ಮಾತುಕತೆಗೆ ಮುಂದಾಗಿ ರೈತರಿಗೆ ನೀರು ಒದಗಿಸಲು ಕ್ರಮಕೈಗೊಳ್ಳಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.

Last Updated : Feb 23, 2022, 8:06 PM IST

For All Latest Updates

ABOUT THE AUTHOR

...view details