ಕರ್ನಾಟಕ

karnataka

ETV Bharat / state

ಟ್ಯೂರಿಸಂ ನಂಬಿದವರ ಜೀವನ ಬಲು ಕಷ್ಟ.. ಪ್ರವಾಸಿಗರಿಲ್ಲದೇ 'ಗೋಳು'ಗುಮ್ಮಟ - ಗೋಲಗುಮ್ಮಟ ಸುದ್ದಿ

ಮೈಸೂರು ಬಿಟ್ರೆ ವಿಜಯಪುರ ನಗರದಲ್ಲಷ್ಟೇ ಜಂಟಕಾ ಬಂಡಿಗಳಿವೆ. ಪ್ರವಾಸಿಗರನ್ನೇ ನಂಬಿರುವ 50ಕ್ಕೂ ಅಧಿಕ ಟಾಂಗಾವಾಲಾಗಳು ಇಂದು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಅಲ್ಲದೆ ಪ್ರವಾಸಿ ಮಾರ್ಗದರ್ಶಿಗಳು, ಫೋಟೋಗ್ರಾಫರ್‌ಗಳು 6 ತಿಂಗಳಿಂದ ಹೊಟ್ಟೆ ತುಂಬಿಸಿಕೊಳ್ಳೋದ್ಹೇಗೆ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ..

Vijayapura tourist places
ಗೋಲಗುಂಬಜ್

By

Published : Sep 28, 2020, 6:10 PM IST

ವಿಜಯಪುರ :ಕೊರೊನಾ ಭೀತಿಯಿಂದ 4 ತಿಂಗಳ ಕಾಲ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರಗಳಿಗೆ ಬೀಗ ಜಡಿಯಲಾಗಿತ್ತು‌‌‌. ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ‌ ಮಾಡಿದ ಬಳಿಕ ಗುಮ್ಮಟನಗರಿಯ ‌ಪ್ರವಾಸೋದ್ಯಮ ಹೇಗಿದೆ ಅನ್ನೋದರ ಕುರಿತ ‌‌ವಿಶೇಷ ವರದಿ ಇದು..

ಕೊರೊನಾ ಭಯಕ್ಕೆ ವಿಜಯಪುರಕ್ಕೆ ಬಾರದ ಪ್ರವಾಸಿಗರು

ಕೊರೊನಾಗೆ ಇಡೀ ಜಗತ್ತೇ ತಲ್ಲಣಿಸಿದೆ. ‌ಅದೆಷ್ಟೋ ಜನ ಉದ್ಯೋಗ ಕಳೆದುಕೊಂಡಿದ್ದಾರೆ‌. ಇನ್ನೂ ಹಲವರು ಜೀವನ ನಡೆಸಲು ಪರದಾಡ್ತಿದ್ದಾರೆ. ಅದಕ್ಕೆ ಪ್ರವಾಸೋದ್ಯಮ ಕೂಡ ಹೊರತಾಗಿಲ್ಲ. ಆದಿಲ್ ಶಾಹಿ ಕಾಲದ ಸ್ಮಾರಕಗಳಿಗೆ ಹೆಸರುವಾಸಿಯಾದ ನಗರವಿದು. ವರ್ಷವಿಡೀ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಕೊರೊನಾ ಕಾರಣ ಮಾರ್ಚ್ 13ರಂದು ಜಿಲ್ಲಾಡಳಿತ 4 ತಿಂಗಳ‌ ಕಾಲ ಸ್ಮಾರಕಗಳಿಗೆ ಪ್ರವಾಸಿಗರು ಭೇಟಿ ನೀಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದಾಗಿ ಪ್ರವಾಸೋದ್ಯಮ ನಂಬಿಕೊಂಡವರ ಬದುಕು ಸಂಕಷ್ಟಕ್ಕೀಡಾಯಿತು.

ಪ್ರತೀ ವರ್ಷ ಗೋಲಗುಮ್ಮಟ ವೀಕ್ಷಣೆಯಿಂದ ಪುರಾತತ್ವ ಇಲಾಖೆಗೆ 66 ಲಕ್ಷ ರೂ. ಆದಾಯ ಬರುತ್ತಿತ್ತು. ವೈರಸ್ ದಾಳಿಗೆ ವಿಶ್ವಖ್ಯಾತ ಗೋಲಗುಂಬಜ್ ಕೂಡ ಒಂಟಿಯಾಗಿದೆ. ಇತ್ತ ಪ್ರತಿದಿನ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಭೇಟಿಯೂ‌ ಕಡಿಮೆಯಾಗಿದೆ. ಹೀಗಾಗಿ, ಹೋಟೆಲ್ ಉದ್ಯಮ ಕೂಡ ನಷ್ಟದ ಹಾದಿ ಹಿಡಿದಿದೆ. ಹೋಟೆಲ್ ಮಾಲೀಕರು ಪ್ರವಾಸಿಗರ ಬರುವಿಕೆಗಾಗಿ ಕಾದಿದ್ದಾರೆ. ಈಗ ಪ್ರವಾಸೋದ್ಯಮ ಆರಂಭಗೊಂಡು 2 ತಿಂಗಳು ಸಮೀಪಿಸುತ್ತಾ ಬಂದ್ರೂ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರ ಕೊರತೆ ಇದೆ. ಅಲ್ಲದೆ ಪುರಾತತ್ವ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರತಿದಿನ‌ ಗುಮ್ಮಟ ವೀಕ್ಷಕರ ಸಂಖ್ಯೆ ಸಾವಿರ ಗಡಿಯೂ ದಾಟುತ್ತಿಲ್ಲ. ಹೀಗಾಗಿ, ಆದಾಯ ಕೊರತೆ ಕಾಣುತ್ತಿದೆ ಎನ್ನುತ್ತಿದ್ದಾರೆ ಹೋಟೆಲ್‌ ಮಾಲೀಕರು.

ಮೈಸೂರು ಬಿಟ್ರೆ ವಿಜಯಪುರ ನಗರದಲ್ಲಷ್ಟೇ ಜಂಟಕಾ ಬಂಡಿಗಳಿವೆ. ಪ್ರವಾಸಿಗರನ್ನೇ ನಂಬಿರುವ 50ಕ್ಕೂ ಅಧಿಕ ಟಾಂಗಾವಾಲಾಗಳು ಇಂದು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಅಲ್ಲದೆ ಪ್ರವಾಸಿ ಮಾರ್ಗದರ್ಶಿಗಳು, ಫೋಟೋಗ್ರಾಫರ್‌ಗಳು 6 ತಿಂಗಳಿಂದ ಹೊಟ್ಟೆ ತುಂಬಿಸಿಕೊಳ್ಳೋದ್ಹೇಗೆ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಸಹ ಯಾವುದೇ ನೆರವು ನೀಡ್ತಿಲ್ಲ ಅಂತಾ ಆರೋಪಿಸ್ತಿದ್ದಾರೆ. ಹೆಚ್ಚಿನ ಪ್ರವಾಸಿಗರು ಸ್ಮಾರಕ ವೀಕ್ಷಿಸಲು ಬಂದ್ರೆ ಜೀವನ ನಡೆಸಬಹುದು ಎನ್ನುತ್ತಿದ್ದಾರೆ. ಕೊರೊನಾ ಭೀತಿಗೆ ಸ್ಥಳೀಯರು ಕೂಡ ಟಾಂಗಾ ಸವಾರಿಗೆ ಹಿಂದೇಟು ಹಾಕುತ್ತಿದ್ದಾರೆ. ಜಟಕಾ ಓಡಿಸುವವರ ಬದುಕೀಗ ಬರೀ ಪ್ರಶ್ನೆಯಾಗಿದೆ.

ABOUT THE AUTHOR

...view details