ವಿಜಯಪುರ :ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪ ಇಲ್ಲ. ಈ ಬಗ್ಗೆ ನನ್ನ ಜೊತೆ ಯಾವ ಸಚಿವರೂ ಮಾತನಾಡಿಲ್ಲ ಎಂದು ಅಲ್ಪಸಂಖ್ಯಾತ ಮತ್ತು ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕ್ಯಾಬಿನೆಟ್ನಲ್ಲಿ ಇದ್ದೇನೆ. ಶಾಸಕರೊಂದಿಗೆ ಉತ್ತಮ ಒಡನಾಟವಿದೆ. ಅಲ್ಲಿ ಎಲ್ಲೂ ಚರ್ಚೆ ಆಗಿಲ್ಲ. ಕೆಲವರಿಗೆ ಬೇಸರ ಇರುತ್ತೆ ನಿಜ. ಅವರು ಏನಾದರೂ ಮಾತನಾಡಿದ್ರೆ ಅದೇ ದೊಡ್ಡ ವಿಷಯವಾಗುತ್ತೆ ಎಂದು ಮಾಧ್ಯಮವನ್ನೇ ಪರೋಕ್ಷವಾಗಿ ಟೀಕಿಸಿದರು. ಡಿಸಿಎಂ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ದೆಹಲಿಗೆ ಹೋಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೆಹಲಿಗೆ ಹೋದವರು ಕೆಲಸದ ಹಿನ್ನೆಲೆ ಹೋಗಿರಬೇಕು. ಅವರಲ್ಲಿ ಎಲ್ಲಿಯಾದ್ರೂ ನಾನು ಸಿಎಂ ಆಗಬೇಕು ಎಂದು ಹೇಳಿದ್ದಾರಾ? ಎಂದು ಪ್ರಶ್ನಿಸಿದರು.