ವಿಜಯಪುರ:ಸರ್ವರಿಗೂ ಶಿಕ್ಷಣ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಸಾಕಷ್ಟು ಹಣ ವ್ಯಯ ಮಾಡುತ್ತಿವೆ. ಆದರೆ ಪ್ರಯತ್ನ ಮಾತ್ರ ವ್ಯರ್ಥವಾಗುತ್ತಲೇ ಇದೆ. ಶಿಥಿಲಾವಸ್ಥೆಯಲ್ಲಿರುವ ಶಾಲೆ ಕಟ್ಟಡ ರಿಪೇರಿ ಮಾಡುವ ಗೋಜಿಗೆ ಹೋಗದಿರುವುದರಿಂದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ.
ಕೊರೊನಾ ವೈರಸ್ನಿಂದ ಕಳೆದ ನಾಲ್ಕು ತಿಂಗಳಿಂದ ಶಾಲೆಗಳು ಆರಂಭಗೊಂಡಿಲ್ಲ. ಈ ವೇಳೆ ಸರ್ಕಾರ ಶಾಲೆಯ ಕಟ್ಟಡ ನವೀಕರಣ ಮಾಡದೇ ಕೈಚೆಲ್ಲಿ ಕುಳಿತಿದೆ. ಜಿಲ್ಲೆಯಲ್ಲಿ ಒಟ್ಟು 2,150 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಸಂಖ್ಯೆ ಬರೋಬ್ಬರಿ 750 ಶಾಲೆಗಳು.
ಸುಸಜ್ಜಿತ ಕಟ್ಟಡವಿಲ್ಲ, ಕಿಟಕಿ, ಬಾಗಿಲು ಮೇಲ್ಛಾವಣೆ ಬೀಳುವ ಹಂತ ತಲುಪಿವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯಲ್ಲಿ 8 ಸಾವಿರಕ್ಕಿಂತ ಹೆಚ್ಚು ಶಿಕ್ಷಕರಿದ್ದಾರೆ. ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಅಕ್ಷರ ದಾಸೋಹ, ಊಟ, ಹಾಲು ಸೇರಿದಂತೆ ಹಲವು ಯೋಜನೆಗಳಿವೆ. ಆದರೆ ಮುಖ್ಯವಾಗಿ ಶಾಲೆಯ ದುರಸ್ತಿ ಮರೆತಂತಿದೆ.