ಮುದ್ದೇಬಿಹಾಳ:ಮೀರತ್ ಬಳಿ ಇರುವ ಎಂಇಜಿ ಯೂನಿಟ್-9ರ ಭಾರತೀಯ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಜಟ್ಟಗಿ ಗ್ರಾಮದ ಯುವ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ ಅವರ ಪಾರ್ಥಿವ ಶರೀರವನ್ನು ಇಂದು ಸ್ವಗ್ರಾಮಕ್ಕೆ ತರಲಾಗಿದ್ದು, ಕುಟುಂಬದವರು ಮತ್ತು ಅಪಾರ ಜನಸಾಗರದ ಮಧ್ಯೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಾಮಾನ್ಯವಾಗಿ ಕರ್ತವ್ಯದಲ್ಲಿದ್ದ ಸೈನಿಕರು ಸಾವನ್ನಪ್ಪಿದರೆ ಪಾಲಿಸುವ ಸರ್ಕಾರಿ ಪ್ರೋಟೋಕಾಲ್ ಇಲ್ಲಿ ಪಾಲನೆ ಆಗಲಿಲ್ಲ. ಆಕಾಶಕ್ಕೆ ಸೈನಿಕರು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸುವ ಪ್ರಕ್ರಿಯೆ ನಡೆಯದಿರುವುದು ದೇಶಭಕ್ತರ ಅಸಮಾಧಾನಕ್ಕೆ ಕಾರಣವಾಯಿತು.
ಯೋಧನ ಅಂತ್ಯಕ್ರಿಯೆಯಲ್ಲಿ ಪಾಲನೆಯಾಗದ ಸರ್ಕಾರಿ ಪ್ರೋಟೋಕಾಲ್ ಗಣ್ಯರಿಂದ ನಮನ:
ಯೋಧನ ಪಾರ್ಥೀವ ಶರೀರವನ್ನು ಬೆಳಗಾವಿ ಮುಖಾಂತರ ಆ್ಯಂಬುಲೆನ್ಸ್ನಲ್ಲಿ ಸ್ವಗ್ರಾಮಕ್ಕೆ ತರಲಾಗಿತ್ತು. ಬಸವೇಶ್ವರ ವೃತ್ತದಲ್ಲಿ ಶೋಕತಪ್ತ ಅಭಿಮಾನಿಗಳು ವಾಹನ ಬರಮಾಡಿಕೊಂಡರು. ನಂತರ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನಕ್ಕೆ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು. ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಇಒ ಶಿವಾನಂದ, ಪಿಎಸ್ಐ ರೇಣುಕಾ ಜಕನೂರು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಬಿ.ಕೆ.ಬಿರಾದಾರ, ಪುರಸಭೆ ಆಡಳಿತದ ಪರವಾಗಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರು ಹೂಮಾಲೆ ಅರ್ಪಿಸಿ, ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.