ಮುದ್ದೇಬಿಹಾಳ:ಅಧರ್ಮದ ದಾರಿಯಲ್ಲಿ ನಡೆದರೆ, ಧರ್ಮಕ್ಕೆ ಅಪಚಾರ ಬಗೆದರೆ ಸಮಾಜ ತೊಂದರೆಗೆ ಈಡಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಸದಾ ಕಾಲ ಧರ್ಮ ಮಾರ್ಗದಲ್ಲೇ ನಡೆಯಬೇಕು ಎಂದು ತೊರಗಲ್ ಸಂಸ್ಥಾನ ಗಚ್ಚಿನಹಿರೇಮಠದ ಗಣಲಿಂಗ ಚಕ್ರವರ್ತಿ ಶ್ರೀ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಯರಝರಿ ಗ್ರಾಮದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆ ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಅವರ ಪ್ರದೇಶಾಭಿವೃದ್ಧಿ ನಿಧಿಯಡಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವುದು ಸಮಾಜಕ್ಕೆ ಹಿತಕರ. ಧರ್ಮದ ಹಾದಿಯಲ್ಲಿ ನಾವೆಲ್ಲ ನಡೆಯಬೇಕು. ಈಗ ಅಧರ್ಮ ಹೆಚ್ಚಾಗಿದ್ದರಿಂದಲೇ ಮನುಷ್ಯ ಮುಖಕ್ಕೆ ಮಾಸ್ಕ್ ಹಾಕಿ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ದೇವತಾ ಕಾರ್ಯಕ್ರಮಗಳು ಸಹಕರಿಸುತ್ತವೆ. ಮಹಾಮಾರಿ ಕೊರೊನಾ ಎದುರಿಸಲು ನಾವೆಲ್ಲ ಸಿದ್ಧರಾಗಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು ಎಂದರು.
ಬಳಿಕ ಯರಝರಿ ಯಲ್ಲಾಲಿಂಗೇಶ್ವರಮಠದ ಮಲ್ಲಾಲಿಂಗ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಊರಿನ ಹಿತಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾಂತೇಶ ಪಟ್ಟಣದ ವಿಧಾನ ಪರಿಷತ್ ಸದಸ್ಯರ ಬೆನ್ನು ಹತ್ತಿ ಅನುದಾನ ತಂದು ಈ ದೇವಸ್ಥಾನ ನಿರ್ಮಿಸಿರುವುದು ಮಾದರಿಯಾಗಿದೆ ಎಂದರು.
ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಇಬ್ಬರೂ ಶ್ರೀಗಳು ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ, ಪೂಜಾ ವಿಧಿ ವಿಧಾನ ನೆರವೇರಿಸಿದರು.