ವಿಜಯಪುರ: ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ಪ್ರತಿ ವರ್ಷ ಗ್ರಾಮೀಣಾಭಿವೃದ್ದಿ ಇಲಾಖೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ 12 ಗ್ರಾಮಗಳು ಆಯ್ಕೆಯಾಗಿವೆ. ಇದರಲ್ಲಿ ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮ ಸಹ ಒಂದು. ಈ ಗ್ರಾಮದ ಅವ್ಯವಸ್ಥೆ ನೋಡಿದರೆ ಗಾಂಧಿ ಕನಸಿನ ಗ್ರಾಮ ಹೀಗಿರುತ್ತಾ? ಎನ್ನುವ ಜಿಜ್ಞಾಸೆ ಮೂಡುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ.
ವಿಜಯಪುರ ನಗರದಿಂದ ಕೇವಲ 7 ಕಿ.ಮೀಟರ್ ದೂರವಿರುವ ಹಿಟ್ನಳ್ಳಿ ಗ್ರಾಮದಲ್ಲಿ 18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಇದೆ. ಹಿಟ್ನಳ್ಳಿ ಹಾಗೂ ಉತ್ನಾಳ ಗ್ರಾಮ ಸೇರಿ ಹಿಟ್ನಳ್ಳಿ ಗ್ರಾಮ ಪಂಚಾಯಿತಿ ರಚಿಸಲಾಗಿದೆ. ಒಟ್ಟು 25 ವಾರ್ಡ್ಗಳು ಇವೆ. ಗ್ರಾಮ ಪಂಚಾಯಿತಿ ಪ್ರತಿ ವರ್ಷದ ಬಜೆಟ್ 1.20 ಕೋಟಿ ರೂ. ಇದೆ. ಒಟ್ಟು 1270 ಮನೆಗಳಿವೆ. ಇವುಗಳಿಗೆ 967 ಶೌಚಾಲಯ ಹಾಗೂ 4 ಸಾರ್ವಜನಿಕ ಶೌಚಾಲಯ ಹೊಂದಿವೆ.
ಗಾಂಧಿ ಪುರಸ್ಕತ ಹಿಟ್ನಳ್ಳಿ ಗ್ರಾಮಕ್ಕೆ ರಾಷ್ಟೀಯ ಹೆದ್ದಾರಿಯೇ ಕಂಟಕ ಕೃಷಿ ಮಹಾವಿದ್ಯಾಲಯ ಹಾಗೂ ವಿಜಯಪುರ ನಗರಕ್ಕೆ ಹಿಟ್ನಳ್ಳಿ ಹೊಂದಿಕೊಂಡಿರುವ ಕಾರಣ ಸಾಕಷ್ಟು ಅಭಿವೃದ್ಧಿಗಳು ನಡೆಯಬೇಕಾಗಿತ್ತು. ಆದರೆ ಹೇಳಿ ಕೊಳ್ಳುವಷ್ಟು ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ವಿಜಯಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ಇದೇ ಗ್ರಾಮದ ಮೇಲೆ ಹಾಯ್ದು ಹೋಗುತ್ತದೆ. ಹಿಟ್ನಳ್ಳಿ ಗ್ರಾಮಕ್ಕೆ ಹೋಗಲು ಇರುವ ಕೆಳಸೇತುವೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರ ರಿಪೇರಿ ಮಾಡಬೇಕಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕಾಗಿದೆ. ಕಳೆದ ಹಲವು ವರ್ಷಗಳಿಂದ ಗ್ರಾಮಕ್ಕೆ ಹೋಗಲು ಸಿ.ಸಿ.ರಸ್ತೆ ನಿರ್ಮಿಸುವುದಾಗಿ ಎನ್ಎಚ್ಎ ಅಧಿಕಾರಿಗಳು ಹೇಳುತ್ತಿದ್ದರೂ ಕೆಲಸ ಮಾತ್ರ ಇನ್ನೂ ಆಗಿಲ್ಲ.
ಗ್ರಾಮ ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ಶಕ್ತಿ ಮೀರಿ ಅಭಿವೃದ್ದಿ ಕಾರ್ಯ ಮಾಡಿರುವದು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿರುವ ಕಾರಣ ಪ್ರಸಕ್ತ ವರ್ಷದ ಗಾಂಧಿ ಗ್ರಾಮ ಪುರಸ್ಕಾರ ಹಿಟ್ನಳ್ಳಿಗೆ ಲಭಿಸಿದೆ. ಆದರೆ ಇನ್ನೂ ಸಾಕಷ್ಟು ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಗ್ರಾಮ ಪಂಚಾಯಿತಿಗೆ ಹೊಂದಿ ಕೊಂಡಿರುವ ಸರ್ಕಾರಿ ಶಾಲೆ ಕೊರೊನಾ ನೆಪದಲ್ಲಿ ಪಾಳು ಬಿದ್ದಂತಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಾಣವಾಗಿಲ್ಲ. ಗ್ರಾಮದ ನೀರಿನ ಸಮಸ್ಯೆ ನಿಗಿಸಲು ಗ್ರಾಮದಲ್ಲಿ ಕೆರೆಗೆ ನೀರು ತುಂಬಿಸಿರುವದು ನಿಜವಾಗಿ ಶ್ಲಾಘನೀಯವಾದ ಕೆಲಸವಾಗಿದೆ. ಆದರೂ ರಾಷ್ಟ್ರೀಯ ಹೆದ್ದಾರಿ ನೆಪದಲ್ಲಿ ಅಭಿವೃದ್ಧಿ ಕಾರ್ಯ ಮರೆಯಬಾರದು ಎನ್ನುವದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಈ ಗ್ರಾಮದ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ 50 ರ ವಿಜಯಪುರ- ಬೆಂಗಳೂರು ಹೆದ್ದಾರಿ ಬುನಾದಿಯಾಗಬೇಕಾಗಿತ್ತು. ಆದರೆ ಅದೇ ಹೆದ್ದಾರಿ ಇಂದು ಹಿಟ್ನಳ್ಳಿ ಸಾಕಷ್ಟು ವ್ಯಾಪಾರ ವಹಿವಾಟು ಕಸಿದುಕೊಂಡಿದೆ. ಕನಿಷ್ಠ ಪಕ್ಷ ಹೆದ್ದಾರಿ ಪ್ರಾಧಿಕಾರ ಮೊದಲು ಗ್ರಾಮಕ್ಕೆ ಸಿ.ಸಿ.ರಸ್ತೆ ನಿರ್ಮಿಸಿ ಗ್ರಾಮದ ಅಭಿವೃದ್ಧಿಗೆ ಮುನ್ನಡೆ ಬರೆಯ ಬೇಕಾಗಿದೆ.