ಮುದ್ದೇಬಿಹಾಳ (ವಿಜಯಪುರ):ನನ್ನನ್ನು ಆಹಾರ ಸರಬರಾಜು ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿರುವ ಬಗ್ಗೆ ಆಯ್ಕೆ ಪಟ್ಟಿಯಲ್ಲಿ ಹೆಸರು ನೋಡಿದಾಗಲೇ ಗೊತ್ತಾಗಿದ್ದು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.
ಆಹಾರ ಸರಬರಾಜು ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿ ನಡಹಳ್ಳಿ ನೇಮಕ - ವಿಜಯಪುರ ಜಿಲ್ಲೆ ಮುದ್ದೇಬಿಹಾಳ
ಆಹಾರ ಸರಬರಾಜು ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೇಮಕಗೊಂಡಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಿಗಮ ಮಂಡಳಿಯ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿ ಆದೇಶ ಹೊರಡಿಸಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಸ್ಥಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಬಿಎಸ್ವೈ ಹಾಗೂ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿಕೊಂಡು ಬಂದಿರುವ ನಾಯಕರುಗಳಿಗೆ ಮಂತ್ರಿಸ್ಥಾನ ಕಲ್ಪಿಸುವುದಕ್ಕೆ ಅವಕಾಶ ಮಾಡಿಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿರುವುದರಿಂದ ನಾನು ಯಾವುದಕ್ಕೂ ನಿರೀಕ್ಷೆ ಮಾಡಿರಲಿಲ್ಲ. ಈಗ ವಹಿಸಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುತ್ತೇನೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲೂ ಬಹುಮತ ಪಡೆದುಕೊಂಡು ಸರ್ಕಾರ ರಚಿಸಲು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ.
ದಾಸೋಹ ಕಾರ್ಯ ಮಾಡಿದ್ದರಿಂದಲೇ ಇಷ್ಟೊಂದು ಮಹತ್ವದ ನಿಗಮ ಮಂಡಳಿ ತಮಗೆ ಲಭಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಾಡಿದ್ದು ದೊಡ್ಡ ಕೆಲಸ ಎಂದು ಹೇಳಲಾರೆ. ನನ್ನನ್ನು ಪ್ರೀತಿಸಿದ ಜನರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸುವ ಕೆಲಸ ಮಾಡಿದ್ದೇನೆ. ಈ ನೇಮಕದ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ಆರು ತಿಂಗಳಲ್ಲಿ ಒಂದೇ ಸಲ ಸಿಎಂ ಅವರನ್ನು ಭೇಟಿ ಮಾಡಿ, ಪ್ರವಾಹ ಪರಿಸ್ಥಿತಿಯಲ್ಲಿರುವ ಹಳ್ಳಿಗಳಿಗೆ ಹಣ ಕೊಡುವಂತೆ ಕೇಳಿದ್ದೆ ಅಷ್ಟೇ ಎಂದರು.