ವಿಜಯಪುರ:ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಆಗಮಿಸಿದ್ದರು. ವಿಜಯಪುರದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದ ಮುರುಗೇಶ ನಿರಾಣಿ, ಆಶ್ರಮದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಸಚಿವರು, ಶ್ರೀಗಳು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬಾರದು. ಮೊದಲಿನಂತೆ ಎಲ್ಲರಿಗೂ ದರ್ಶನ ನೀಡುತ್ತಾರೆ ಎಂದು ಹೇಳಿದರು.
ಇದೇ ವೇಳೆ, ಸರ್ಕಾರದಿಂದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಇನ್ನು ಮೂರು ತಿಂಗಳಿನಲ್ಲಿ ಇದರ ಸ್ಪಷ್ಟರೂಪ ತಿಳಿಯಲಿದೆ. ಅಂತಿಮ ವರದಿ ಬಳಿಕ ಯಾರಿಗೆ ಎಷ್ಟು ಪ್ರತಿಶತ ಮೀಸಲಾತಿ ಎಂಬುದು ಗೊತ್ತಾಗುತ್ತದೆ. ಹಾಗೆಯೇ ಜನರು ಮೀಸಲಾತಿಯನ್ನು ಒಪ್ಪಿಕೊಳ್ಳಬೇಕು ಎಂದರು.
ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಶ್ರಮದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಕಳೆದೊಂದು ವಾರದಿಂದ ನಿತ್ಯ ಆಶ್ರಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಶ್ರೀಗಳ ಆರೋಗ್ಯದ ಕುರಿತು ಊಹಾಪೋಹ ಹಿನ್ನೆಲೆಯಲ್ಲಿ ಅವರ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಮೂರು ದಿನಗಳಿಂದ ಮಧ್ಯಾಹ್ನ ಭಕ್ತರಿಗೆ ದರ್ಶನ ಶ್ರೀಗಳು ನೀಡುತ್ತಿದ್ದಾರೆ. ಇಂದು ಕೂಡ ಭಕ್ತರು ಶ್ರೀಗಳ ದರ್ಶನ ಪಡೆದಿದ್ದಾರೆ.
ಸಚಿವೆ ಭೇಟಿ: ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಲು ಸಚಿವೆ ಶಶಿಕಲಾ ಜೊಲ್ಲೆ ಕೂಡ ಆಶ್ರಮಕ್ಕೆ ಭೇಟಿ ನೀಡಿದ್ದರು. ವಿಶ್ರಾಂತಿಯಲ್ಲಿರುವ ಶ್ರೀಗಳನ್ನು ಅವರ ಆಶ್ರಮದ ಮೊದಲ ಮಹಡಿಯ ಕೋಣೆಯಲ್ಲಿ ಸಚಿವೆ ಭೇಟಿಯಾದರು.
ಇದನ್ನೂ ಓದಿ:ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು