ವಿಜಯಪುರ: ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ತ್ಯಾಗದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೇಂದ್ರದಲ್ಲಿ ಸಚಿವರಾಗಿದ್ದರು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅಣು ಪರೀಕ್ಷೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದರು. ಅಂದು ಇವರನ್ನು ದಿ. ಅನಂತ್ ಕುಮಾರ್ ತಡೆದರು. ನಂತರ ಜೆಡಿಎಸ್ ಸೇರಿ ಟೋಪಿ ಹಾಕಿಕೊಂಡು ನಮಾಜ್ ಮಾಡಿದ್ದರು ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಈಗ ಹಿಂದೂ ಹುಲಿ ಎಂದು ಹೇಳುವುದು ಹಾಸ್ಯಾಸ್ಪದ. ವಿಜಯಪುರದಲ್ಲಿ ಹೇಗೆ ಗೆದ್ದಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಬೇರೆ ಜಿಲ್ಲೆಯಲ್ಲಿ ಬಿಡಿ ವಿಜಯಪುರ ಜಿಲ್ಲೆಯಲ್ಲೂ ಯಾರೊಬ್ಬ ಬಿಜೆಪಿ ಶಾಸಕರನ್ನೂ ಗೆಲ್ಲಿಸಲಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ವಿಜಯ ಸಂಕೇಶ್ವರ ಸೇರಿದಂತೆ ಎಲ್ಲರಿಗೂ ಬೈದಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿಯಲ್ಲಿ 2500 ಕೋಟಿ ಕೊಟ್ಟರೆ ಸಿಎಂ, ಮಂತ್ರಿ ಮಾಡಲು ರೂ. 100 ಕೋಟಿ, 10-25 ಕೋಟಿ ಕೊಟ್ಟವರಿಗೆ ನಿಗಮ ಮಂಡಳಿ ನೀಡುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿಗೆ ಡ್ಯಾಮೇಜ್ ಆಗಿದೆ. ಮಂದ್ಯಾಗ ಒದೆಯುವುದು, ಸಂಧ್ಯಾಗ ಕಾಲ ಹಿಡಿಯುವ ಕೆಲಸ ಮಾಡಿದ್ದಾರೆ.
ನಡಹಳ್ಳಿ ವಿರುದ್ಧ ದೇವರ ಹಿಪ್ಪರಗಿಯಲ್ಲಿ ಹೀನಾಯವಾಗಿ ಹಿಂದೆ ಸೋತಿದ್ದು ನೆನಪಿಸಿಕೊಳ್ಳಲಿ. ನಂತರ ಜೆಡಿಎಸ್‌ನಿಂದ ವಿಜಯಪುರದಲ್ಲಿ ಸ್ಪರ್ಧಿಸಿ ಸೋತಿದ್ದು ಯಾಕೆ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಸಿಎಂ ಆಗಿದ್ದಾಗ ಜಾತಿ ಹೆಸರಿನಲ್ಲಿ ಬ್ಲ್ಯಾಕ್ಮೇಲ್ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಆತ್ಮಾವಲೋಕನ ಸಭೆಗಳಲ್ಲಿ ಚಿಕ್ಕೋಡಿ, ಬಾಗಲಕೋಟೆ ಜೋಕರ್ ಎಂದು ಹೇಳಿಕೊಂಡು 3 ಗಂಟೆಗಳ ಸಭೆಯಲ್ಲಿ ಇವರೇ 45 ನಿಮಿಷ ಮಾತನಾಡಿದ್ದಾರೆ. ವಿಜಯಪುರ ಸಭೆ ವಿಳಂಬವಾಗಲಿ ಅಥವಾ ನಡೆಯಬಾರದು ಎಂದು ದುರುದ್ದೇಶ ಅವರಲ್ಲಿತ್ತು. ಶಶಿಕಲಾ ಜೊಲ್ಲೆ, ಸಂಸದ ರಮೇಶ್ ಜಿಗಜಿಣಗಿ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಕ್ಕೆ ಯತ್ನಾಳ್ ಬೆಂಬಲಿಗರು ಗೊಂದಲ ಸೃಷ್ಠಿಸಿದ್ದಾರೆ ಎಂದು ಆರೋಪಿಸಿದರು.