ವಿಜಯಪುರ: ಎಟಿಎಂ ಒಡೆಯಲು ಯತ್ನಿಸಿದ ಮೂವರು ದರೋಡೆಕೋರರು ಸೆಕ್ಯುರಿಟಿ ಗಾರ್ಡ್ವೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್‌ನಲ್ಲಿ ತಡರಾತ್ರಿ ನಡೆದಿದೆ.
ಎಟಿಎಂ ಒಡೆಯಲು ವಿಫಲ ಯತ್ನ: ದರೋಡೆಕೋರರಿಂದ ಸೆಕ್ಯುರಿಟಿ ಗಾರ್ಡ್ ಹತ್ಯೆ - Murder in Sindagi
ಎಟಿಎಂನಿಂದ ಹಣ ದೋಚಲು ಯತ್ನಿಸಿದ ದರೋಡೆಕೋರರು ಸೆಕ್ಯುರಿಟಿ ಗಾರ್ಡ್ವೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಪಟ್ಟಣದ ಎಪಿಎಂಸಿ ಬಳಿಯ ಐಸಿಐಸಿಐ ಬ್ಯಾಂಕ್ ಎಟಿಎಂಗೆ ದರೋಡೆಕೋರರು ತಡರಾತ್ರಿ 1.30ರ ಸುಮಾರಿಗೆ ನುಗ್ಗಿದ್ದಾರೆ. ಮೊದಲು ಎಟಿಎಂ ಬಳಿ ಮಲಗಿದ್ದ ಸೆಕ್ಯುರಿಟಿ ಗಾರ್ಡ್ ರಾಹುಲ್ ಖೀರು ಲಮಾಣಿ (25)ಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಎಟಿಎಂನಿಂದ ಹಣ ಎಗರಿಸಲು ಅದೇ ಸುತ್ತಿಗೆಯಿಂದ ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಅಷ್ಟರೊಳಗಾಗಿ ಸೈರನ್ ಕೂಗಿಕೊಂಡಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ದರೋಡೆಕೋರರು ಎಟಿಎಂನಲ್ಲಿದ್ದ ಹಣ ಕದಿಯಲು ಆಗಮಿಸಿರುವುದು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂವರು ಮಂಕಿ ಕ್ಯಾಪ್ ಹಾಕಿಕೊಂಡು ಆಗಮಿಸಿರುವ ಕಾರಣ ಅವರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.