ಮುದ್ದೇಬಿಹಾಳ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 16ನೇ ವಾರ್ಡ್ ಹಾಗೂ ಅದರ ಅಕ್ಕಪಕ್ಕದ ವಾರ್ಡಿನಲ್ಲಿ ಸಂಗ್ರಹವಾಗಿದ್ದ ಕಸವನ್ನು ವಿಲೇವಾರಿ ಮಾಡುವ ಮೂಲಕ ಸದಸ್ಯರು ವಾರ್ಡ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಕಸ ಬಿದ್ದು ವಾರ ಕಳೆದರೂ ವಿಲೇವಾರಿಗೆ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಧೋರಣೆಗೆ ಬೇಸತ್ತ ವಾರ್ಡ್ ಸದಸ್ಯೆಯ ಪುತ್ರ ಅಬ್ದುಲ್ ಮಜೀದ್ ಮಕಾನದಾರ್ ನಿನ್ನೆ ತಮ್ಮ ಸ್ನೇಹಿತರೊಂದಿಗೆ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದರು.
ಈ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಮುಖ್ಯಾಧಿಕಾರಿ ಗೋಪಾಲ ಕಾಸೆ ತಮ್ಮ ಸ್ವಚ್ಛತಾ ವಿಭಾಗದ ಸಿಬ್ಬಂದಿ ಮಹಾಂತೇಶ್ ಕಟ್ಟಿಮನಿ, ಬಸವರಾಜ ಬಾಗಲಕೋಟ ಅವರಿಗೆ ಸೂಚಿಸಿ ಪೌರ ಕಾರ್ಮಿಕರನ್ನು ಕಳುಹಿಸಿ ಕಸ ವಿಲೇವಾರಿ ಮಾಡಿಸಿದ್ದಾರೆ.
ಬಿಎಸ್‌ಎನ್‌ಎಲ್ ಕಚೇರಿಯ ಸುತ್ತಮುತ್ತ ಅಲ್ಲಿನ ನಿವಾಸಿಗಳು ಕಸ ತಂದು ಹಾಕುತ್ತಿದ್ದನ್ನು ವಿಲೇವಾರಿ ಮಾಡಿ ಡಿಡಿಟಿ ಪೌಡರ್ ಸಿಂಪಡಣೆ ಮಾಡಿದ್ದಾರೆ. ಪುರಸಭೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಣ್ಣು ತೆರೆಸಿದ ಈಟಿವಿ ಭಾರತಕ್ಕೆ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ.