ಮುದ್ದೇಬಿಹಾಳ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೊರೊನಾ ರೋಗಿಗಳ ವಾರ್ಡ್ನಲ್ಲಿ ಸರಿಯಾಗಿ ಊಟವನ್ನೂ ನೀಡದೆ ಗೋಳಾಡಿಸಲಾಗುತ್ತಿದೆ ಎಂದು ಪುರಸಭೆ ಆಡಳಿತ ಮಂಡಳಿ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಸದಸ್ಯ ಮಹೆಬೂಬ ಗೊಳಸಂಗಿ ಮಾತನಾಡಿ, ಕೊರೊನಾ ರೋಗಿಗಳಿಗೆ ಸರ್ಕಾರದಿಂದ ಅಲ್ಪೋಪಹಾರ ನೀಡಲು ಸಾಧ್ಯವಿಲ್ಲವೆಂದು ಹೇಳಿದರೆ ನಾವು ಸ್ವಂತ ಖರ್ಚಿನಲ್ಲಿ ಭರಿಸುತ್ತೇವೆ. ಅದಕ್ಕೆ ಅನುಮತಿ ನೀಡಿ ಎಂದರೂ ಕೆಲವೊಂದು ಅಡ್ಡಿಗಳಿವೆ ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಾರೆ.
ಇಲ್ಲಿನ ವಾರ್ಡ್ನಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಪಿಪಿಇ ಕಿಟ್ ಧರಿಸಿಕೊಂಡು ಚಿಕಿತ್ಸೆ ಕೊಡುತ್ತಿಲ್ಲ. ಹಾಗಿದ್ದರೆ ಸರಿಯಾಗಿ ರೋಗಿಗಳಿಗೆ ಹೊಟ್ಟೆ ತುಂಬ ಊಟ ಕೊಡಲು ಕಷ್ಟವೇ ಎಂದು ಪ್ರಶ್ನಿಸಿದರು.
ವೈದ್ಯರ ಜೊತೆಗೆ ಪುರಸಭೆ ಅಧ್ಯಕ್ಷೆ-ಸದಸ್ಯರ ಜಟಾಪಟಿ ಕೂಡಲೇ ಕೊರೊನಾ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಬೆಳಗಿನ ಉಪಹಾರ ನೀಡಿ ಅವರನ್ನು ಕಾಳಜಿಯಿಂದ ಆರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವೈದ್ಯರೊಂದಿಗೆ ಜಟಾಪಟಿ:
ಇದಕ್ಕೂ ಮುನ್ನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಸಿ ಅವರೊಂದಿಗೆ ಪುರಸಭೆ ಅಧ್ಯಕ್ಷೆ, ಸದಸ್ಯರು ಜಟಾಪಟಿ ನಡೆಸಿದರು.
ಕೊರೊನಾ ರೋಗಿಗಳಿಗೆ ಸರಿಯಾಗಿ ಊಟ ಕೊಡದೆ ಉಪವಾಸ ಹಾಕುತ್ತಿದ್ದೀರಿ ಎಂದಾಗ ಪ್ರತಿಕ್ರಿಯಿಸಿದ ಡಾ. ಶೇಗುಣಸಿ, ನೀವು ಹಾಗೆಲ್ಲ ಹೇಳಬೇಡಿ, ನಾವು ಎರಡು ದಿನ ಒಂದೇ ಬ್ರೆಡ್, ಚಹಾ ಸೇವಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇವೆ.
ತಜ್ಞ ಸಿಬ್ಬಂದಿ ಕೊರತೆ ಇರುವ ಕಾರಣ ಅವರ ಕೆಲಸವನ್ನೂ ನಾನೇ ಮಾಡಿದ್ದೇನೆ. ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಬೆಳಗಿನ ಅಲ್ಪೋಪಹಾರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿರುವ ಕೊಠಡಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತನಾಡಿ ಅವರ ತೊಂದರೆ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಪುರಸಭೆ ಅಧ್ಯಕ್ಷೆ ಮಾತನಾಡಿದರು.
ಸರ್ಕಾರ ಕೊರೊನಾ ರೋಗಿಗಳಿಗೆ ಎಲ್ಲ ವ್ಯವಸ್ಥೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ ಎಂದು ದೂರಿದರು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತು ಮುಂದುವರೆಸಿ, ರೋಗಿಗಳನ್ನು ಮಾತನಾಡಿಸಿದಾಗ ಸರಿಯಾಗಿ ಊಟ ಕೊಡುತ್ತಿಲ್ಲ. ಕಪ್ಪಾಗಿರುವ ಬಾಳೆಹಣ್ಣು ಕೊಡುತ್ತಿದ್ದಾರೆ. ಇಲ್ಲಿ ಊಟ ಕೊಡಬೇಕು ಎಂದು ಟೆಂಡರ್ ಆದ ವ್ಯಕ್ತಿ ಕುಷ್ಟಗಿ ತಾಲೂಕಿನವರು. ಆದರೆ ಸರಿಯಾಗಿ ಊಟದ ವ್ಯವಸ್ಥೆ ಆಗುತ್ತಿಲ್ಲ ಎಂದು ರೋಗಿಗಳು ನಮ್ಮ ಮುಂದೆ ಹೇಳಿದರು.
ಮಾತ್ರೆ, ಔಷಧಿ ಕೊಟ್ಟಾಗ ಅವರಿಗೆ ರೋಗನಿರೋಧಕ ಶಕ್ತಿ ಹೆಚ್ಚಲು ಪೌಷ್ಟಿಕ ಆಹಾರ ಕೊಡಬೇಕು. ಆದರೆ ಇಲ್ಲಿ ಬೆಳಗ್ಗೆ ಒಂದು ಬ್ರೆಡ್, ಚಹಾ ಅಷ್ಟೇ ಕೊಟ್ಟು ಮದ್ಯಾಹ್ನ ಮೊಟ್ಟೆ, ಒಂದು ಬಟ್ಟಲು ಅನ್ನ, ಒಂದಿಷ್ಟು ಸಾರು ಹಾಕುತ್ತಿದ್ದಾರೆ. ಇದು ಕೊರೊನಾ ರೋಗಿಗಳ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ.
ಸರ್ಕಾರವಾಗಲಿ, ತಾಲೂಕಾಡಳಿತವಾಗಲಿ ಕೊರೊನಾ ರೋಗಿಗಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಸಮರ್ಪಕ ಆಹಾರ ಪೂರೈಸಬೇಕು ಎಂದು ಆಗ್ರಹಿಸಿದರು.
ಸದಸ್ಯ ವೀರೇಶ ಹಡಲಗೇರಿ ಮಾತನಾಡಿ, ಕೋವಿಡ್-19 ರೂಪಾಂತರಿ ವೈರಸ್ ಭಯಾನಕವಾಗಿದ್ದರೂ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.
ಪಟ್ಟಣದ ಆಸ್ಪತ್ರೆಯಲ್ಲಿ 13 ರೋಗಿಗಳಿದ್ದು, ಸರಿಯಾಗಿ ಊಟವಿಲ್ಲ, ಬಿಸಿ ನೀರು ಕೊಡುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚಾಗಿರುವ ಕೋವಿಡ್ ರೋಗಿಗಳನ್ನು ಬದುಕುಳಿಸುವ ಕೆಲಸ ಮಾಡಬೇಕು. ಕೋವಿಡ್‌ನಿಂದ ಮೃತಪಟ್ಟರೆ ಅದಕ್ಕೆ ತಾಲೂಕಾಡಳಿತವೇ ನೇರ ಹೊಣೆಯಾಗುತ್ತದೆ.
ಅಲ್ಲದೇ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮಾತನಾಡಿಸಿದರೆ, ಕೊರೊನಾ ರೋಗಿಗಳಿಗೆ ಊಟ ಕೊಡಬೇಕು ಎಂಬ ಬಗ್ಗೆ ಇನ್ನೂ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಾಗಿದ್ದರೆ ಜಿಲ್ಲಾಡಳಿತ ಕೊರೊನಾ ರೋಗಿಗಳಿಗೆ ಊಟ ಕೊಡಬೇಡಿ ಎಂದು ಹೇಳುತ್ತಿದೆಯೇ ಎಂದು ಸದಸ್ಯರು ಪ್ರಶ್ನಿಸಿದರು.