ಮುದ್ದೇಬಿಹಾಳ: ಕೊರೊನಾ ವೈರಸ್ ಹಿನ್ನೆಲೆ ಜನ ಬಸ್ ನಿಲ್ದಾಣಕ್ಕೆ ಬರುತ್ತಿಲ್ಲ. ವ್ಯಾಪಾರ ಕುಸಿದಿದ್ದು ಬಾಡಿಗೆ ಕಟ್ಟಲು ಸಾಧ್ಯವಾಗದೇ ತೊಂದರೆಯಲ್ಲಿದ್ದೇವೆ. ಕೂಡಲೇ ಅಧಿಕಾರಿಗಳು ಬಾಡಿಗೆ ಮನ್ನಾ ಮಾಡುವಂತೆ ಒತ್ತಾಯಿಸಿ ಬಸ್ ನಿಲ್ದಾಣದ ಮಳಿಗೆದಾರರು ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಮುದ್ದೇಬಿಹಾಳ: ಬಾಡಿಗೆ ಮನ್ನಾಕ್ಕೆ ಬಸ್ ನಿಲ್ದಾಣ ಮಳಿಗೆ ವ್ಯಾಪಾರಿಗಳ ಒತ್ತಾಯ
ಲಾಕ್ಡೌನ್ ಸಡಿಲಿಕೆಯಾದರು ಸಹ ಜನ ಬಸ್ ನಿಲ್ದಾಣಕ್ಕೆ ಬರುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟಲು ಆಗುತ್ತಿಲ್ಲವೆಂದು ಮುದ್ದೇಬಿಹಾಳದ ಬಸ್ ನಿಲ್ದಾಣದ ಮಳಿಗೆದಾರರು ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವ್ಯಾಪಾರಸ್ಥರಾದ ವಿರೇಶ ಇಲ್ಲೂರ, ಕಿಶೋರ್, ಚನ್ನಪ್ಪಗೌಡ ಪಾಟೀಲ ಮತ್ತಿತರರು, ಲಾಕ್ ಡೌನ್ ಆದಾಗ ಮಳಿಗೆದಾರರಿಂದ ಬಾಡಿಗೆ ಪಡೆದುಕೊಂಡಿಲ್ಲ. ಹಾಗೆಯೇ ಜೂನ್ ತಿಂಗಳಿಂದ ಬಸ್ ಸಂಚಾರ ಆರಂಭಗೊಂಡಿದ್ದರೂ ಜನ ಬರುತ್ತಿಲ್ಲ. ಅದರಲ್ಲೂ ಹಳ್ಳಿಗಳಿಗೆ ಬಸ್ ಬಿಡದ ಕಾರಣ ಜನರ ಓಡಾಟ ವಿರಳವಾಗಿದೆ. ಇದಲ್ಲದೇ ಶಾಲಾ ಕಾಲೇಜು ಬಂದ್ ಆಗಿದ್ದರಿಂದ ವ್ಯಾಪಾರ ನಿಂತಿದೆ. ಸದ್ಯಕ್ಕೆ ಶೇ.20 ರಷ್ಟು ಬಾಡಿಗೆ ಪಾವತಿಸಲು ಅಧಿಕಾರಿಗಳು ಆದೇಶಿದ್ದಾರೆ. ಕೂಡಲೇ ಈ ಆದೇಶ ಹಿಂಪಡೆದು ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ, ಲಾಕ್ಡೌನ್ನಿಂದ ತೊಂದರೆಯಾಗಿರುವುದು ನಿಜ. ಇದೀಗ ಜಿಲ್ಲೆಯಾದ್ಯಂತ ಮಳಿಗೆದಾರರು ಬಂದ್ ಮಾಡಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.