ಮುದ್ದೇಬಿಹಾಳ(ವಿಜಯಪುರ):ಪುರಸಭೆ ಸದಸ್ಯ ಮೆಹಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ 53 ದಿನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್ ಬಾಗಲಕೋಟ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜೊತೆಗೆ ಅವರ ಮೂಲ ಹುದ್ದೆಗೆ ನಿಯೋಜಿಸಿ ಸರ್ಕಾರದ ಪೌರಾಡಳಿತ ನಿರ್ದೇಶಕಿ ಮಂಜುಶ್ರೀ ಎನ್ ಆದೇಶ ಹೊರಡಿಸಿದ್ದಾರೆ.
ಕಳೆದ 53 ದಿನಗಳಿಂದ ಮುಖ್ಯಾಧಿಕಾರಿ ಅವ್ಯವಹಾರಗಳು ಸೇರಿದಂತೆ 12 ಬೇಡಿಕೆಗಳನ್ನು ಇಟ್ಟುಕೊಂಡು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಆಗ್ರಹಿಸಿ ವಿವಿಧ ಹಂತದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದ ಹೋರಾಟಗಾರರು ತಮಗೆ ನ್ಯಾಯ ಸಿಗುವವರೆಗೂ ಧರಣಿ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮೂವರು ಅಧಿಕಾರಿಗಳ ತಂಡವನ್ನು ನಿಯೋಜಿಸಿ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದ್ದರು. ಅದರಂತೆ ಸಲ್ಲಿಸಿದ್ದ ವರದಿಯನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶಕರಿಗೆ ಕ್ರಮಕ್ಕೆ ಸಲ್ಲಿಸಿದ್ದರು. ತನಿಖಾ ತಂಡ 4 ಅಂಶಗಳಲ್ಲಿ ಕರ್ತವ್ಯಲೋಪ ಎಸಗಿದ್ದಾರೆಂದು ವರದಿ ಮಾಡಿರುವದನ್ನು ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರಿ ಮಂಜುಶ್ರೀ ಇವರು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(1) ಅಡಿ ಮುಖ್ಯಾಧಿಕಾರಿ ಬಾಗಲಕೋಟ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.