ಮುದ್ದೇಬಿಹಾಳ:ಎಲ್ಲೆಡೆ ಕೊರೊನಾ ಮಹಾಮಾರಿ ಸೋಂಕು ಹೆಚ್ಚಾಗುತ್ತಿದ್ದು, ಮನೆ ಸದಸ್ಯರೇ ಸೋಂಕಿಗೊಳಗಾದವರನ್ನ ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿ ಧೈರ್ಯ ತುಂಬಿದ್ದಾರೆ.
ಕೊರೊನಾ ಪಾಸಿಟಿವ್ ಇದ್ದರೂ ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯ! - ಹೆರಿಗೆ ಮಾಡಿಸಿ ಧೈರ್ಯ ತುಂಬಿದ ವೈದ್ಯ
ಕೊರೊನಾ ಸಂದರ್ಭದಲ್ಲಿ ಗರ್ಭಿಣಿಯರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದರ ಬಗ್ಗೆಯೂ ವೈದ್ಯ ಡಾ.ರಂಗನಾಥ್ ತಿಳಿಸಿದ್ದಾರೆ.
ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರ ಎರಡು ಬಾರಿ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದ್ದು, ಹೆರಿಗೆಗೆಂದು ಬರುವ ಗರ್ಭಿಣಿಯರಿಗೆ ಒಳ್ಳೆಯ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯಕ್ಕೆ ಕೊರೊನಾ ಹಾವಳಿಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಸವಾಲಿನ ಕೆಲಸ ಆಗಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ಜೀವ ಪಣಕ್ಕಿಟ್ಟು ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ವೈದ್ಯ ಡಾ.ರಂಗನಾಥ ಮಾತನಾಡಿ, ಕರೊನಾ ಸಂದರ್ಭದಲ್ಲಿ ಪಾಸಿಟಿವ್ ಹೊಂದಿರುವ ಗರ್ಭಿಣಿಯರಿಗೆ ವಿಜಯಪುರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಮಾಡಲಾಗಿದೆ. ನಮ್ಮಲ್ಲಿ ತಿಂಗಳಿಗೆ 50-60 ಹೆರಿಗೆಗಳು ಆಗುತ್ತವೆ. ಹೆರಿಗೆಗೂ ಮುನ್ನ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ವರದಿ ಗಮನಿಸಿ ಮಹಿಳೆಯ ಪರಿಸ್ಥಿತಿ ಅವಲೋಕಿಸಿ ಹೆರಿಗೆ ಮಾಡಿಸಿಕೊಳ್ಳುತ್ತೇವೆ. ಮೂರು ಜನ ಮಹಿಳೆಯರಿಗೆ ಪಾಸಿಟಿವ್ ಬಂದಿದ್ದರೂ ಹೆರಿಗೆ ಮಾಡಿಸಿಕೊಳ್ಳಲಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಗರ್ಭಿಣಿಯರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದರ ಬಗ್ಗೆಯೂ ವೈದ್ಯ ಡಾ.ರಂಗನಾಥ್ ತಿಳಿಸಿದ್ದು, ಜ್ವರದ ಲಕ್ಷಣಗಳಿರುವ ಕುಟುಂಬದ ಸದಸ್ಯರಿಂದ ಅಂತರ ಕಾಯ್ದುಕೊಂಡು ಇರಬೇಕು ಎಂದು ತಿಳಿಸಿದ್ದಾರೆ.