ಮುದ್ದೇಬಿಹಾಳ :ಕೃಷಿ ಚಟುವಟಿಕೆಗೆ ಸಕಾಲಕ್ಕೆ ಎತ್ತುಗಳು ದೊರೆಯದ ಕಾರಣ ಸ್ವಂತ ಮಗನೇ ಎತ್ತುಗಳಂತೆ ಕೃಷಿ ಉಪಕರಣ ಎಳೆದು ಹೊಲದಲ್ಲಿ ಎಡೆ ಹೊಡೆದಿರುವ ಘಟನೆ ತಾಲೂಕಿನ ಹುಲ್ಲೂರ ತಾಂಡಾ ಸಮೀಪದ ಜಮೀನೊಂದರಲ್ಲಿ ನಡೆದಿದೆ.
ಮಗನನ್ನೇ ಎತ್ತಿನಂತೆ ಹೂಡಿ ಹೊಲ ಎಡೆ ಹೊಡೆದ ರೈತ.. ಕೊರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಶಾಲೆ-ಕಾಲೇಜು ತೆರೆದಿಲ್ಲ. ಹೀಗಾಗಿ, ಎಸ್ಸೆಎಸ್ಸೆಎಲ್ಸಿ ಮುಗಿಸಿರುವ ತನ್ನ ಮಗ ಯಶವಂತನನ್ನು ಚಲಮಿ ಗ್ರಾಮದ ರೈತ ಸಂಗನಗೌಡ ಮುತ್ತತ್ತಿ ಹೊಲದ ಕೆಲಸಕ್ಕೆ ಕರೆದೊಯ್ದಿದ್ದರು. ಮಳೆ ಚೆನ್ನಾಗಿ ಆಗಿದೆ. ಜಮೀನಿನಲ್ಲಿ ಕಳೆ ಬೆಳೆದಿದೆ.
ಹೀಗಾಗಿ, ರೈತ ಮುತ್ತತ್ತಿ ಜಮೀನಿನ ಎಡೆ ಹೊಡೆಯುವುದಕ್ಕೆ ತಮ್ಮ ಸಂಬಂಧಿಕರ ಬಳಿ ಎತ್ತುಗಳನ್ನು ಬಾಡಿಗೆಗೆ ಕೇಳಿದ್ದಾರೆ. ಆದರೆ, ಅವು ಲಭ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂದೆ-ಮಗ ಸೇರಿಕೊಂಡು ಜಮೀನಿನಲ್ಲಿ ಕಳೆ ತೆಗೆದು ಎಡೆ ಹೊಡೆದಿದ್ದಾರೆ. ಕಳೆದೆರಡು ದಿನಗಳಿಂದ ಸುಮಾರು 9 ಎಕರೆ ಜಮೀನಿನ ಎಡೆ ಹೊಡೆದಿದ್ದಾರೆ.
ಈ ಕುರಿತು ರೈತ ಸಂಗನಗೌಡ ಮುತ್ತತ್ತಿ ಮಾತನಾಡಿ, ನಮ್ಮದು ಒಣ ಬೇಸಾಯದ ಜಮೀನು. ಈ ಬಾರಿ ಸುಮಾರು 9 ಎಕರೆ ಜಮೀನಿನಲ್ಲಿ ತೊಗರಿ ಬೆಳೆದಿದ್ದೇವೆ. ಮಳೆಯಾಗಿ ಜಮೀನಿನಲ್ಲಿ ಕಳೆ ಬೆಳೆದಿತ್ತು. ಕೊರೊನಾದಿಂದ ತನ್ನ ಮಗ ಮನೆಯಲ್ಲೇ ಇದ್ದ. ಹೀಗಾಗಿ, ನಾನು ಮತ್ತು ಮಗ ಇಬ್ಬರೂ ಸೇರಿಕೊಂಡು ಕಳೆ ತೆಗೆದು ಎಡೆ ಹೊಡೆದಿದ್ದೇವೆ ಎಂದರು.
ರೈತ ಸಂಗನಗೌಡ ಮುತ್ತತ್ತಿ ಹೀಗೆ ಹೇಳ್ತಾರೆ.. ಬ್ಯಾಂಕ್ಗಳಲ್ಲಿ ಮೂರು ಲಕ್ಷ ರೂ.ಸಾಲ ಮಾಡಿ ತೊಗರಿ ಬಿತ್ತಿದ್ದೇವೆ. ಬೆಳೆ ಕೈಗೆ ಹತ್ತಿದರೆ ಮಾಡಿದ ಸಾಲ ತೀರಿಸುವುದಕ್ಕೆ ಸಾಧ್ಯವಿದೆ. ಕಳೆದ ಎರಡು ವರ್ಷ ಬೆಳೆ ವಿಮೆ ನೋಂದಣಿ ಮಾಡಿ ವಿಮಾ ಕಂತು ಕಟ್ಟಿದ್ದರೂ ನಮ್ಮ ಬೆಳೆ ಹಾನಿಗೆ ಪರಿಹಾರ ಬಂದಿಲ್ಲ.
ತೊಗರಿ ಹಾಳಾದರೂ ಬೆಳೆವಿಮೆ ಪರಿಹಾರ ಸಿಗಲಿಲ್ಲ. ನಾವು ಮುಗ್ಧ ರೈತರು ಅಕ್ಷರ ಬರುವುದಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳೆಲ್ಲ ಬಂದು ಹೋಗಿದ್ದಾರೆ. ಆದರೆ, ಪರಿಹಾರವೇ ಬಂದಿಲ್ಲ ಎಂದು ಅಳಲು ತೋಡಿಕೊಂಡರು.