ಮುದ್ದೇಬಿಹಾಳ :ಪಟ್ಟಣದ ಹೃದಯ ಭಾಗದಲ್ಲಿರುವ ಸಾರಿಗೆ ಸಂಸ್ಥೆಯ ಬಸ್ ಡಿಪೋವನ್ನು ಹಡಲಗೇರಿ ರಸ್ತೆಗೆ ಸ್ಥಳಾಂತರಿಸಿ ಆ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಿರುವ ಬಸ್ ನಿಲ್ದಾಣ ಜಾಗದಲ್ಲಿ ಬೆಂಗಳೂರು ಮಾದರಿಯಲ್ಲಿ ಪಾರ್ಕಿಂಗ್ ಸಹಿತ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಚಿಂತನೆ ನಮ್ಮದಾಗಿದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷರೂ ಆದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಾರಿಗೆ ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ಮೈಬೂಬಸಾಬ ದೇವೂರ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ, ಎಇಇ ಜಗನ್ನಾಥ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಸ್ ನಿಲ್ದಾಣ, ಡಿಪೋ, ಇನ್ನಿತರೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಆದರೆ, ವ್ಯಾಪಾರಕ್ಕೆ ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಸರ್ಕಾರಿ ಜಾಗ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದರೂ ಬಳಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಿಸಿದರೆ ಸಂಸ್ಥೆಗೆ ಹೆಚ್ಚಿನ ಆದಾಯದ ಜೊತೆಗೆ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಕಟ್ಟಡಕ್ಕೂ ಮುನ್ನವೇ ಅಂಗಡಿಗಳನ್ನು ಹರಾಜು ಹಾಕಿ, ಡಿಪಾಜಿಟ್ ಸಂಗ್ರಹಿಸಿ ಇಲಾಖೆಯಿಂದಲೇ ಮಳಿಗೆ ಕಟ್ಟಿಸುವ ಬಗ್ಗೆ ಪರಿಶೀಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪಿಪಿಟಿ (ಖಾಸಗಿ ಸಹಭಾಗಿತ್ವದ) ಮಾದರಿಯಲ್ಲಿ ಬೃಹತ್ ಮಳಿಗೆ ಕಟ್ಟುವುದರಿಂದ ವ್ಯಾಪಾರ, ಉದ್ಯಮಕ್ಕೆ ಪ್ರೋತ್ಸಾಹ ಸಿಗುತ್ತದೆ. ದುಡಿಯುವ ಕೈಗಳಿಗೆ ಉದ್ಯೋಗ ದೊರೆಯಲಿದೆ. ಪಟ್ಟಣದಲ್ಲಿ ವಾಣಿಜ್ಯ ಚಟುವಟಿಕೆಗೆ ಹೆಚ್ಚು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು.
ಡಿಪೋಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಇದಕ್ಕೆ ಸರ್ಕಾರದಿಂದ 5 ಕೋಟಿ ರೂ. ಹಣ ಮಂಜೂರಾಗಿದೆ. ಒಂದೆರಡು ತಿಂಗಳಲ್ಲಿ ತಹಶೀಲ್ದಾರ್ ಅವರು ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಇನ್ನೂ ಹೆಚ್ಚಿನ ಹಣ ಬೇಕಾದ್ರೆ ಕೊಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ ಎಂದರು.