ಮುದ್ದೇಬಿಹಾಳ: ಎಲ್ಲೆಡೆ ಬಿಸಿಲಿನ ಹೊಡೆತಕ್ಕೆ ಜನ, ಜಾನುವಾರುಗಳು ತತ್ತರಿಸಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಆದರೆ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕವಡಿಮಟ್ಟಿ ಗ್ರಾಮದ ಬಾಂದಾರ ಬಿರು ಬೇಸಿಗೆಯಲ್ಲೂ ತುಂಬಿದೆ.
ಬೇಸಿಗೆಯಲ್ಲೂ ತುಂಬಿದ ಬಾಂದಾರ: ಜನ-ಜಾನುವಾರುಗಳಿಗೆ ಜೀವಜಲದ ಆಧಾರ!
ರಾಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಜಲ ಮೂಲಗಳು ಬತ್ತಿ ಹೋಗಿವೆ. ಆದರೆ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಾಂದಾರ, ಬಿರು ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದು ಜನರ ಸಂತೋಷಕ್ಕೆ ಕಾರಣವಾಗಿದೆ.
ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಅಣೆಕಟ್ಟಿನಿಂದ ಕೆಬಿಜೆಎನ್‌ಎಲ್‌ದ ದೊಡ್ಡ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಅದರಿಂದ ಪಾಸಿಂಗ್ ಕಾಲುವೆ ನಿರ್ಮಿಸಿಕೊಂಡು ಬಾಂದಾರ ತುಂಬಲು ಅಧಿಕಾರಿಗಳು ಶ್ರಮ ಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಗ್ರಾಪಂ ಪಿಡಿಒ ಪಿ.ಎಸ್.ಕಸನಕ್ಕಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಕಾಲುವೆಗಳ ಮೂಲಕ ತಾಲೂಕಿನಲ್ಲಿರುವ ಎಲ್ಲಾ ಕೆರೆಗಳನ್ನು ತುಂಬಿಸಲು ಹೇಳಿದ್ದರಿಂದ ಇಂದು ನಮ್ಮ ತಾಲೂಕಿನಲ್ಲಿ 80-90% ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ. ಅಲ್ಲದೆ ಬತ್ತಿದ್ದ ಬಾವಿ, ಕೊಳವೆ ಬಾವಿಯಲ್ಲೂ ನೀರು ಬಂದಿದೆ. ಕೆಲ ರೈತರು ತಮ್ಮ ಹೊಲಗಳಿಗೂ ನೀರು ಹಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.