ವಿಜಯಪುರ: "ಆಧ್ಯಾತ್ಮ ಅನ್ನೋದು ಕೇವಲ ಮಾತುಗಳಿಗೆ, ಪುಸ್ತಕಗಳ ಬರಹಗಳಿಗೆ ಸೀಮಿತವಾಗಿರುವ ಈ ಸಂದರ್ಭದಲ್ಲಿ ಅನುಷ್ಠಾನಗೊಳಿಸಬಲ್ಲ ಪರಮ ವ್ಯಕ್ತಿಗಾಗಿ ಸಮಾಜ ಹಿಂದಿನಿಂದಲೂ ಹುಡುಕಾಟದಲ್ಲಿ ಇದೆ. ಸಿದ್ದೇಶ್ವರ ಶ್ರೀಗಳು ಮಾತು, ಕೃತಿಗಳೆರಡರಲ್ಲೂ ಸಾಮ್ಯತೆ ಕಾಪಾಡಿಕೊಂಡು ಬಂದಿದ್ದು ಅವರ ಮೇಲಿನ ಗೌರವ ವೃದ್ಧಿಗೆ ಪ್ರೇರಣೆ" ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಪರಮಪೂಜ್ಯ ಜ್ಞಾನಯೋಗಾಶ್ರಮದ ಸಂತ ಶ್ರೇಷ್ಠ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಗುರುನಮನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ 'ಯುವಕರು ಮತ್ತು ದೇಶಪ್ರೇಮ' ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೀವನೋತ್ಸಾಹ ಇರುವ ಪ್ರತಿಯೊಬ್ಬರೂ ಯುವಕರೇ ಎಂಬುದು ಸಿದ್ದೇಶ್ವರ ಶ್ರೀಗಳ ಅಭಿಮತ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭದ್ರ ನೈತಿಕ ತಳಹದಿ, ಅಪರಿಮಿತ ಪರಿಶ್ರಮದ ಅವಶ್ಯಕತೆ ಕುರಿತಾಗಿ ಶ್ರೀಗಳ ಮಾತುಗಳನ್ನು ಇದೇ ಸಂದರ್ಭದಲ್ಲಿ ನೆನೆದು, ಅವರ ಚಿಂತನೆಗಳ ಅಡಿಪಾಯದಲ್ಲಿ ರಾಷ್ಟ್ರ ನಿರ್ಮಾಣದ ಕುರಿತಾಗಿ ಶ್ರೀಗಳ ಆಶ್ರಮದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಅವರು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್ ಪುತ್ರ ಸತ್ಯಜಿತ್ ಪಾಟೀಲ್ ಕೂಡ ಗೋಷ್ಠಿಯಲ್ಲಿ ಪಾಲ್ಗೊಂಡು ಮನೋಜ್ಞವಾಗಿ ಮಾತನಾಡಿ ಗಮನ ಸೆಳೆದರು. ಪ್ರತಿದಿನದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶ್ರೀಗಳ ಆಶ್ರಮಕ್ಕೆ ಭೇಟಿ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಗೋಷ್ಠಿಯಲ್ಲಿ ಪಾಲ್ಗೊಂಡು ಯುವ ಸಮೂಹದ ಮಾತುಗಳನ್ನಾಲಿಸಿದರು. ಸಂಸದ ತೇಜಸ್ವಿ ಸೂರ್ಯ ಮತ್ತು ಸತ್ಯಜಿತ್ ಪಾಟೀಲ್ ಅವರನ್ನು ಆಶ್ರಮದ ವತಿಯಿಂದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದ ತೇಜಸ್ವಿ ಸೂರ್ಯ, "ಒಬ್ಬರನ್ನೊಬ್ಬರು ಬೈಯುವವರು, ಹಾವು ಮುಂಗುಸಿಗಳಂತೆ ಆಡುವವರು ಎಲ್ಲಾ ಸೇರಿ ಅಲಯನ್ಸ್ ಮಾಡಿಕೊಂಡಿದ್ದಾರೆ. ದಿನಬೆಳಗಾದರೆ ಆಮ್ ಆದ್ಮಿ, ಟಿಎಂಸಿಯವರು ಕಾಂಗ್ರೆಸ್ಗೆ ಬೈತಾರೆ. ಇಂತಹವರೆಲ್ಲ ಸೇರಿಕೊಂಡು I.N.D.I.A ಅಲಯನ್ಸ್‌ನಲ್ಲಿ ಮಾಡಿದ್ದಾರೆ. ಅಲಯನ್ಸ್ ಪಾರ್ಟ್ನರ್ಗಳ ಸಂಬಂಧ ಇದು" ಎಂದು INDIA ಅಲಯನ್ಸ್ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.