ವಿಜಯಪುರ:ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕಳೆದ 6 ವರ್ಷದಿಂದ ಸುಳ್ಳು ಹೇಳುತ್ತಿದ್ದಾರೆ. ಇವರು ಪಾಪದ ಬಿಜೆಪಿ ಸರ್ಕಾರದ ಪಾಪದ ಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿ ಸರ್ಕಾರ ಅನೈತಿಕವಾಗಿ ರಚನೆಯಾಗಿದೆ. ಅದರಲ್ಲಿ ಕಾರಜೋಳ ಪಾಪದ ಮಂತ್ರಿಯಾಗಿದ್ದಾರೆ ಎಂದು ವ್ಯಂಗವಾಡಿದರು.
ಸದನದಲ್ಲಿ ಸಿದ್ದರಾಮಯ್ಯ ಅವರ ಪಂಚೆ ಪುರಾಣ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರವನ್ನು ಟ್ರೋಲ್ ಮಾಡುವುದು ಚಿಲ್ಲರೆ ಕೆಲಸವಾಗಿದೆ. ಸದ್ಯ ಸಿದ್ದರಾಮಯ್ಯ ಅವರಿಗೆ ಆಗಿರಬಹುದು, ಮುಂದೆ ಯಡಿಯೂರಪ್ಪ ಅವರಿಗೂ ಆಗಬಹುದು. ಇದೊಂದು ಕೀಳುಮಟ್ಟದ ಕೆಲಸ, ಯಾರು ಮಾಡಬಾರದು ಎಂದರು.