ವಿಜಯಪುರ:ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ವೇಳೆ ಕಾಲು ಜಾರಿ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ. ಗೀತಾ ಹೊನ್ನೂರ (38), ಶೋಭಿತಾ (12) ಹಾಗೂ ವಾಸುದೇವ (10) ಮೃತರು.
ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಗೆ ಇಳಿದಿದ್ದಾನೆ. ಇದನ್ನು ಕಂಡು ಸಹೋದರಿ ಶೋಭಿತಾ ತಮ್ಮನನ್ನು ಕಾಡಾಡಲು ಹೋಗಿದ್ದು ಇಬ್ಬರಿಗೂ ಈಜಲು ಬಾರದೇ ಮುಳುಗುತ್ತಿದ್ದರು. ಮಕ್ಕಳನ್ನು ಉಳಿಸಲು ಹೋಗಿ ತಾಯಿ ಮತ್ತು ಇಬ್ಬರು ಮಕ್ಕಳು ನದಿನೀರು ಪಾಲಾಗಿದ್ದಾರೆ ಎಂದು ತಿಳಿದಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಾವು:ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಪ್ರಾಧ್ಯಾಪಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಸಮೀಪದಲ್ಲಿ ಇತ್ತೀಚೆಗೆ ಜರುಗಿತ್ತು. ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್ (36) ಹಾಗೂ ಬಾಲಾಜಿ (36) ಎಂದು ಗುರುತಿಸಲಾಗಿದೆ.
ಪ್ರವಾಸಕ್ಕೆಂದು ಬಂದಿದ್ದ ಪುನೀತ್ ಹಾಗೂ ಬಾಲಾಜಿ ಅವರು ತೀರ್ಥಹಳ್ಳಿಯ ಯೋಗಾ ನರಸಿಂಹ ಮಠದ ಸಮೀಪದ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ತಿಂಡಿ ತಿಂದು ನದಿಯಲ್ಲಿ ಈಜಲು ಹೋಗಿದ್ದರು. ನದಿಗಿಳಿದ ಪುನೀತ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರನ್ನು ರಕ್ಷಿಸಲು ಹೋದ ಬಾಲಾಜಿ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.