ವಿಜಯಪುರ: ಜಿಲ್ಲೆಯ 12 ತಾಲೂಕುಗಳ 199 ಗ್ರಾಮ ಪಂಚಾಯತ್ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮುಂಜಾನೆ ಮೂರು ಗಂಟೆಗೆ ಪೂರ್ಣಗೊಂಡಿದೆ. 3,754 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲವು ಸಾಧಿಸಿದ್ದಾರೆ.
ನಿನ್ನೆ ಬೆಳಗ್ಗೆ 7 ಗಂಟೆಯಿಂದ ಜಿಲ್ಲೆಯ 9 ಕೇಂದ್ರದಲ್ಲಿ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 199 ಗ್ರಾ.ಪಂ.ಗಳಿಗೆ 3,754 ನೂತನ ಸದಸ್ಯರು ಆಯ್ಕೆಗೊಂಡಿದ್ದಾರೆ. ಪಕ್ಷದ ಬೆಂಬಲಿತರ ಲೆಕ್ಕಾಚಾರ ನೋಡಿದರೆ ಆಡಳಿತಾರೂಢ ಬಿಜೆಪಿಗಿಂತ ಪ್ರತಿ ಪಕ್ಷ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗಿದ್ದಾರೆ.
ಅಂದಾಜಿನ ಪ್ರಕಾರ ಕಾಂಗ್ರೆಸ್ ಬೆಂಬಲಿತ ಸದಸ್ಯರು 1,000ಕ್ಕೂ ಹೆಚ್ಚಿದ್ದಾರೆ. ಬಿಜೆಪಿ ಬೆಂಬಲಿತರು 850ಕ್ಕಿಂತ ಹೆಚ್ಚು ಇದ್ದಾರೆ. ಇನ್ನೂ ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಜೆಡಿಎಸ್ ಬೆಂಬಲಿತರು ಅತಿ ವಿರಳವಾಗಿ ಆಯ್ಕೆಯಾಗಿದ್ದಾರೆ. ಕನಿಷ್ಠ 100ರ ಗಡಿ ದಾಟಿದ್ದಾರೆ. ಅವರಿಗಿಂತ ಪಕ್ಷೇತರರು ಹೆಚ್ಚಾಗಿ ಆಯ್ಕೆಯಾಗಿದ್ದಾರೆ. ಅಂದರೆ ಕನಿಷ್ಠ 120ರಷ್ಟು ಸದಸ್ಯರು ಇದ್ದಾರೆ. ಮುಂದೆ ಇವರು ಯಾವ ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಾರೆ ಎನ್ನುವುದು ನೋಡಬೇಕಿದೆ.