ಮುದ್ದೇಬಿಹಾಳ (ವಿಜಯಪುರ):ಮನೆಯ ಎದುರಿಗೆ ಇದ್ದ ಚರಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಪ್ರಜ್ಞಾಹೀನನಾಗಿರುವ ತಾಲೂಕಿನ ಕುಂಟೋಜಿಯ ಸುದೀಪ್ ಹೊಸಮನಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರತಿ ತಿಂಗಳು ಒಂದು ಸಾವಿರ ರೂ.ಮಾಶಾಸನ ನೀಡುವ ಮೂಲಕ ನೆರವಿಗೆ ಧಾವಿಸಿದೆ.
ಮನೆಯ ಎದುರಿಗೆ ಇದ್ದ ಚರಂಡಿಯಲ್ಲಿ ಆಟವಾಡುತ್ತಲೇ ಬಿದ್ದು ಪ್ರಜ್ಞೆ ಕಳೆದುಕೊಂಡಿರುವ ಸುದೀಪನಿಗೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲಾರದಷ್ಟು ಪ್ರಜ್ಞೆ ಶೂನ್ಯವಾಗಿದ್ದು ಎಲ್ಲ ಕೆಲಸಗಳನ್ನು ಬೇರೆಯವರ ಆಸರೆಯಲ್ಲಿಯೇ ಮಾಡಬೇಕಿದೆ.
ಧರ್ಮಸ್ಥಳ ಸಂಸ್ಥೆಯಿಂದ ಮಾಶಾಸನ ವಿತರಣೆ ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಸಂಸ್ಥೆಯಿಂದ ಜುಲೈ ತಿಂಗಳಿನಿಂದ ಪ್ರತಿ ತಿಂಗಳು ಬಾಲಕನ ಚಿಕಿತ್ಸೆಗೆ ಹಾಗೂ ದೈನಂದಿನ ಖರ್ಚಿಗೆ ಎಂದು ಒಂದು ಸಾವಿರ ರೂ. ಮಾಶಾಸನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಯೋಜನಾ ನಿರ್ದೇಶಕ ಶ್ರೀನಿವಾಸ ಪೂಜಾರಿ, ತಾಲೂಕು ಯೋಜನಾಧಿಕಾರಿ ಹೊನ್ನಪ್ಪ ಸುದೀಪನ ತಾಯಿಗೆ ಒಂದು ಸಾವಿರ ರೂ.ಮಾಶಾಸನದ ಆದೇಶ ಪ್ರತಿ ಹಾಗೂ ಹಣ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷೆ ಬಸಮ್ಮ ಒಣರೊಟ್ಟಿ, ಸೇವಾ ಪ್ರತಿನಿಧಿ ಶ್ವೇತಾ ಹೂಗಾರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದು ಹೆಬ್ಬಾಳ, ಮುಖಂಡ ಪ್ರಕಾಶ ಹೂಗಾರ ಇದ್ದರು.