ವಿಜಯಪುರ: ಸಚಿವ ಸಂಪುಟ ವಿಸ್ತರಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಸಚಿವ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಇದೇ ವಿಚಾರವಾಗಿ ಇಂದು ವಿಜಯಪುರದಲ್ಲಿ ಮಾತನಾಡಿರುವ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲೆಯಲ್ಲಿ ನನಗಿಂತ ಇಬ್ಬರು ಹಿರಿಯ ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಿ ಎಂದು ಹೇಳಿದ್ದಾರೆ.
ಶಾಸಕ ಸೋಮನಗೌಡ ಪಾಟೀಲ ಸಾಸನೂರ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನನಗಿಂತ ಹಿರಿಯ ಶಾಸಕರು. ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.
ನನಗೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ. ನಮ್ಮ ತಂದೆ ಈ ಹಿಂದೆ ಸಚಿವರಾಗಿದ್ದರು. ಅವರ ಜೊತೆ ಕೆಲಸ ಮಾಡಿದ್ದೇನೆ. ದೇವರಹಿಪ್ಪರಗಿ ಮತ ಕ್ಷೇತ್ರದ ಪೀರಾಪುರ - ಬೂದಿಹಾಳ ಏತ ನೀರಾವರಿ ಯೊಜನೆಗೆ ಹಣ ನೀಡುವ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದೇನೆ. ಸಿಎಂ ನಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್ವೈ
ಸಿಎಂ ಪುತ್ರನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈವರೆಗೆ ವಿಜಯೇಂದ್ರ ಅವರನ್ನು ಭೇಟಿಯೇ ಮಾಡಿಲ್ಲ. ಅಧಿಕಾರದಲ್ಲಿ ನನಗೆ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಅನುಭವ ಆಗಿಲ್ಲ ಎಂದರು.