ಮುದ್ದೇಬಿಹಾಳ: ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ದಂಪತಿಯ ಎರಡು ಮಕ್ಕಳು ಅನಾಥವಾಗಿದ್ದನ್ನು ತಿಳಿದ ಶಾಸಕ ಎಎಸ್ ಪಾಟೀಲ ನಡಹಳ್ಳಿ, ಒಂದು ಲಕ್ಷ ರೂ. ವೈಯಕ್ತಿಕ ಪರಿಹಾರದ ಚೆಕ್‌ನ್ನು ಶನಿವಾರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ತಬ್ಬಲಿ ಮಕ್ಕಳಿಗೆ ಮಿಡಿದ ಶಾಸಕ ನಡಹಳ್ಳಿ ಹೃದಯ ತಾಲೂಕಿನ ಯರಗಲ್ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಶಾಸಕರು ಆಗಮಿಸಿದ್ದ ವೇಳೆ, ಯರಗಲ್ ಗ್ರಾಮದ ಅಜ್ಜನ ಮನೆಯಲ್ಲಿ ಆಸರೆ ಪಡೆದಿರುವ ಎರಡು ವರ್ಷದ ಸುಜೀತ ಪಾಟೀಲ ಹಾಗೂ ಐದು ವರ್ಷದ ಸುಪ್ರೀತ ಪಾಟೀಲನ ಭವಿಷ್ಯದ ಸಹಾಯಕ್ಕೆ ಶಾಸಕರು ಒಂದು ಲಕ್ಷ ರೂ. ಚೆಕ್‌ನ್ನು ನೀಡಿದರು.
ತಬ್ಬಲಿ ಮಕ್ಕಳು:
ಮಿಣಜಗಿ ಗ್ರಾಮದಲ್ಲಿ ರಾಜೇಶ್ವರಿ ಪಾಟೀಲ್ ದಂಪತಿ ಕ್ಷುಲ್ಲಕ ಕಾರಣಗಳಿಗಾಗಿ ಕಳೆದ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗಿದ್ದ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದರು. ಇದನ್ನು ಮಿಣಜಗಿ ಗ್ರಾಮಕ್ಕೆ ಭೇಟಿ ನೀಡಿದಾಗ ತಿಳಿದಿದ್ದ ಶಾಸಕ, ಯರಗಲ್ ಗ್ರಾಮಕ್ಕೆ ಬಂದಾಗ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶನಿವಾರ ಯರಗಲ್ ಗ್ರಾಮಕ್ಕೆ ಆಗಮಿಸಿದಾಗ ತಬ್ಬಲಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಜ್ಜ ಬಸವರಾಜ ಕತ್ತಿ ಅವರಿಗೆ ಒಂದು ಲಕ್ಷ ರೂ.ಚೆಕ್‌ನ್ನು ಶಾಸಕರು ನೀಡಿದ್ದಾರೆ.
ತಬ್ಬಲಿ ಮಕ್ಕಳಿಗೆ ಮಿಡಿದ ಶಾಸಕ ನಡಹಳ್ಳಿ ಹೃದಯ ಈ ಕಾರ್ಯದ ಮೂಲಕ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಂಡರು. ಇದೇ ಕಾರ್ಯಕ್ರಮದಲ್ಲಿ ಸಾಧಕರಾದ ಸಂಗಮೇಶ ಶಿವಣಗಿ, ಬಸವರಾಜ ಹಡಪದ, ಶಿಕ್ಷಕಿ ಶಿವಲೀಲಾ ಕಡಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಇದನ್ನೂ ಓದಿ:ವಸತಿ ಕಲ್ಪಿಸುವಂತೆ ಶಾಸಕ ನಡಹಳ್ಳಿಗೆ ಕೈ ಮುಗಿದು ಮನವಿ ಮಾಡಿದ ಮಹಿಳೆಯರು