ಮುದ್ದೇಬಿಹಾಳ:ಮತಕ್ಷೇತ್ರದ ಜನರ ಆರೋಗ್ಯ ರಕ್ಷಣೆಯ ಹೊಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸುವಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸಫಲರಾಗಿದ್ದಾರೆ. ಅಲ್ಲದೆ, ಕ್ವಾರಂಟೈನ್ನಲ್ಲಿರುವ ವಲಸೆ ಕಾರ್ಮಿಕರಿಗೆ ರೊಟ್ಟಿ ವಿತರಿಸಲು ಶಾಸಕ ನಡಹಳ್ಳಿ ದಂಪತಿ ಮುಂದಾಗಿದ್ದಾರೆ.
ಕಡು ಬಡವರಿಗೆ ದಿನಸಿ ಕಿಟ್, ವಲಸೆ ಕಾರ್ಮಿಕರಿಗೆ ಅಗತ್ಯ ಸಾಮಗ್ರಿ ವಿತರಣೆ, ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್ಗೆ ಮಾಸ್ಕ್, ದಿನಸಿ ಕಿಟ್ ಕೊಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಇನ್ನಿತರ ರಾಜ್ಯಗಳಿಂದ ಆಗಮಿಸುತ್ತಿರುವ ಹಾಗೂ ಈಗಾಗಲೇ ಆಗಮಿಸಿ ಕ್ವಾರಂಟೈನ್‌ಲ್ಲಿರುವ ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಸಾಮಾನ್ಯ ಊಟ ಕೊಡಲಾಗುತ್ತಿದೆ. ಇದೀಗ ಶಾಸಕರು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಕಾರ್ಮಿಕರ ಹಸಿವು ನೀಗಿಸಲು ಎರಡು ಲಕ್ಷ ರೊಟ್ಟಿಗಳನ್ನು ಪೂರೈಸಲು ಮುಂದಾಗಿದ್ದಾರೆ.
ಬಸರಕೋಡದಲ್ಲಿ ರೊಟ್ಟಿ ತಯಾರಿಕೆ:
ಈ ಮಹಾದಾಸೋಹ ಕಾರ್ಯಕ್ಕೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕೈಜೋಡಿಸಿದೆ. ರೊಟ್ಟಿಗಳನ್ನು ತಯಾರಿಸುವ ಉಸ್ತುವಾರಿಯನ್ನು ದೇವಸ್ಥಾನದ ಅಧ್ಯಕ್ಷ ಕೆ.ವೈ. ಬಿರಾದಾರ ಅವರಿಗೆ ವಹಿಸಲಾಗಿದೆ. ಈ ಕಾರ್ಯದಲ್ಲಿ 30 ಮಹಿಳೆಯರು ತೊಡಗಿದ್ದು, ಕೆಲವರು ಮನೆಗೆ ಹಿಟ್ಟು ತೆಗೆದುಕೊಂಡು ಹೋಗಿ ರೊಟ್ಟಿ ಮಾಡಿಕೊಡಲು ಮುಂದೆ ಬಂದಿದ್ದಾರೆ.