ವಿಜಯಪುರ:ಸರ್ಕಾರ ಜನರಿಗೆ ಲಗಾಮು ಹಾಕಿ ಹಿಡಿದಿಡುವ ಮೂಲಕ ಆಡಳಿತ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಇದರ ದುಷ್ಪರಿಣಾಮ ಬೀರಲಿದೆ ಎಂದು ನಾಗಠಾಣಾ ಮತ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಾಸಕ ದೇವಾನಂದ ಚವ್ಹಾಣ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಲಗಾಮು ಹಾಕಿ ಆಡಳಿತ ಮಾಡಿದ್ರೆ ಮುಂದೆ ಅದರ ಪರಿಣಾಮ ಅನುಭವಿಸುತ್ತದೆ ಎಂದು ಎಚ್ಚರಿಸಿದ್ರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣಾ ಕುರಿತು ಮಾತನಾಡಿದ ಶಾಸಕ ಚವ್ಹಾಣ್, ಅದು ದೊಡ್ಡವರ ಕುಸ್ತಿ, ನಾನು ಪ್ರೇಕ್ಷಕ ಅಷ್ಟೇ. ನಂದು ನೋಡುವ ಕೆಲಸ ಮಾತ್ರ, ದೊಡ್ಡವರ ಮಧ್ಯೆ ನಾನು ಭಾಗವಹಿಸಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನ್ನ ರಾಜಕೀಯ ಅನುಭವದ ಪ್ರಕಾರ, ರಾಜಕೀಯ ವ್ಯವಸ್ಥೆಯಲ್ಲಿ ಕುದುರೆ ವ್ಯಾಪಾರದ ರಾಜಕಾರಣ ನಡೆಯುತ್ತಿದೆ. ಅದು ಆಗಬಾರದು. ಕೊರೊನಾ ಭೀತಿಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರ ನಿಲುವಿನ ಮೇಲೆ ನಾನು ಜನರ ಮುಂದೆ ಹೋಗುತ್ತೇನೆ. ರಾಜ್ಯದ ಎಲ್ಲ ಕ್ಷೇತ್ರದ ಪರಿಸ್ಥಿತಿ ಕೂಡ ಇದೇ ಆಗಿದೆ ಎಂದು ಅವರು ದೂರಿದರು.