ವಿಜಯಪುರ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರೇ ಇದ್ದಾರೆ ಎನ್ನುವುದು ಸಾಬೀತಾಗಿದೆ. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಹೊರ ಬಂದಿದೆ. ಇದರ ಹಿಂದೆ ಇನ್ನೊಬ್ಬ ಸೂತ್ರಧಾರ ಸಿಎಂ ಪುತ್ರನ ಹೆಸರು ಹೊರ ಬರುವುದಿಲ್ಲ. ಇದರಲ್ಲಿ ಒಳ ಒಪ್ಪಂದ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮತ್ತೆ ಸಿಎಂ ಬಿಎಸ್ ವೈ ಹಾಗೂ ಅವರ ಪುತ್ರನ ವಿರುದ್ಧ ಆರೋಪ ಮಾಡಿದ್ದಾರೆ.
ನಗರದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ, ಸಿಎಂ ಬಿಎಸ್ ವೈ ಹಾಗೂ ಅವರ ಪುತ್ರ ವಿಜಯೇಂದ್ರ ಅವರು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಡಿಕೆಶಿ ಬಗ್ಗೆ ಮೃದುಧೋರಣೆ ತಳೆದಿದ್ದಾರೆ. ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ಹೇಳುವಂತೆ ಸಿಎಂ ಸಿಡಿ ಡಿಕೆಶಿ ಬಳಿ ಇದೆ. ಡಿಕೆಶಿ ವ್ಯವಹಾರ ಎಲ್ಲ ಮಾಹಿತಿ ಸಿಎಂ ಬಳಿ ಇದೆ. ಹೀಗಾಗಿ ಅವರು ಒಬ್ಬರಿಗೂಬ್ಬರು ಬಿಟ್ಟುಕೊಡುವುದಿಲ್ಲ ಎಂದರು.
ಸಿಡಿ ಸಂತ್ರಸ್ತೆ ಡಿಕೆಶಿ ಅವರೇ ತನಗೆ ರಕ್ಷಣೆ ನೀಡಿದ್ದಾರೆ ಎಂದು ಹೇಳುತ್ತಿದ್ದಾಳೆ. ಹೀಗಿರುವಾಗ ಎಸ್ ಐ ಟಿ ತನಿಖೆ ದಿಕ್ಕು ಹೇಗೆ ಇದೆ ಎಂದು ಊಹಿಸಬಹುದು. ಎಸ್ ಐಟಿಯಲ್ಲಿರುವ ಐಪಿಎಸ್ ಅಧಿಕಾರಿಯೇ ಸಿಎಂ ಪುತ್ರನ ಕೈಗೊಂಬೆಯಾಗಿದ್ದಾರೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ತನಿಖೆಯಾಗುತ್ತೆ ಎಂದು ಯತ್ನಾಳ ಅನುಮಾನ ವ್ಯಕ್ತಪಡಿಸಿದರು.
ಸದನ ಹಾಳು ಮಾಡಿದರು: ಕರ್ನಾಟಕದ ನೀರಾವರಿ ಬಗ್ಗೆ ಸದನದಲ್ಲಿ ಮಾತನಾಡಬೇಕಾಗಿತ್ತು. ಆದರೆ, ಅಲ್ಲಿಯೂ ಕೇವಲ ಸಿಡಿ ಪ್ರಕರಣದ್ದೇ ಗದ್ದಲವಾಯಿತು. ಕೃಷ್ಣಾ ನೀರಾವರಿ ಸೇರಿ ಪ್ರತಿ ವರ್ಷ 25 ಸಾವಿರ ಕೋಟಿ ರೂ. ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಕೇವಲ 5600 ಸಾವಿರ ಕೋಟಿ ರೂ. ನೀಡಿ ಸುಮ್ಮನಾಗಿದ್ದಾರೆ. ಅ ಬಗ್ಗೆ ಕೇಳಬೇಕೆಂದರೆ ಸದನ ಸಿಡಿಯಲ್ಲಿ ಮುಳುಗಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಶಾಸಕರ ಸಹಿ ಸಂಗ್ರಹ ಸುಳ್ಳು:ತಮ್ಮ ಮೇಲೆ ಕ್ರಮ ಕೈಗೊಳ್ಳಬೇಕು ಎಂದು 65 ಶಾಸಕರು ಸಿಎಂ ಭೇಟಿಯಾಗಿರುವ ಸುದ್ದಿಯನ್ನು ನಿರಾಕರಿಸಿದ ಶಾಸಕ ಯತ್ನಾಳ, ಇದು ಶುದ್ಧ ಸುಳ್ಳು, ಅಲ್ಲಿ ಸಿಎಂ ಭೇಟಿಯಾಗಿದ್ದು, ಅನುದಾನ ವಿಚಾರ ತಮ್ಮ ವಿರುದ್ಧ ದೂರು ನೀಡಲು ಅಲ್ಲ ಎಂದು ಸ್ಪಷ್ಟಪಡಿಸಿದರು.