ವಿಜಯಪುರ: ಡಿಸಿಎಂ ಸ್ಥಾನಗಳನ್ನು ಕೈಬಿಡುವುದು ಒಳ್ಳೆಯದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮುಖ್ಯಮಂತ್ರಿ ಒಬ್ಬರೇ ಸಾಕು, ಉಪ ಮುಖ್ಯಮಂತ್ರಿಗಳು ಬೇಡ. ಉಳಿದವರು ಸಚಿವರಾಗಿ ಇರಲಿ. ಉಪಮುಖ್ಯಮಂತ್ರಿ ಯಾಕೆ ಬೇಕೆಂದು ಪ್ರಶ್ನಿಸಿದರು. ಡಿಸಿಎಂ ಹುದ್ದೆಗೆ ಸಾಂವಿಧಾನಾತ್ಮಕ ಸ್ಥಾನ ಅಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥರಿದ್ದಾರೆ, ಅವರ ನಾಯಕತ್ವದಲ್ಲೇ ಎಲ್ಲರೂ ಕೆಲಸ ಮಾಡಲಿ ಎಂದರು.
ಅಲ್ಲದೇ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೆ ಸ್ಥಾನಮಾನ ವಿಚಾರವಾಗಿ ಮಾತನಾಡಿದ ಯತ್ನಾಳ್, ಯಡಿಯೂರಪ್ಪನವರು ಸೂಕ್ತ ಸ್ಥಾನಮಾನ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ವಿಜಯಪುರದವರಿಗೆ ಇದೆ. ಕೊಟ್ಟರೆ ನೊಡೋಣ. ಅದೇ ಒಂದು ಗೂಟದ ಕಾರು ಹಾಗೂ ಪೈಲಟ್ಗಾಗಿ ಸಚಿವ ಸ್ಥಾನ ಬೇಡ. ಅದರ ಬದಲು ಅಭಿವೃದ್ಧಿಗಾಗಿ ಜಿಲ್ಲೆಗೆ ಇವತ್ತು ಸಾವಿರಾರು ಕೋಟಿ ಬರುತ್ತಿದೆ. ಜಿಲ್ಲೆ ಅಭಿವೃದ್ಧಿ ಆದ್ರೆ ನನಗೆ ಅಷ್ಟೇ ಸಾಕು ಎಂದು ಶಾಸಕ ಹೇಳಿದ್ರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ನಾಯಕರು ಜಾರ್ಖಂಡ್ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆಗೆ ಎರಡು ವಾರ ಎಲ್ಲರೂ ಕಾಯೋಣ. ನಿನ್ನೆ ಐತಿಹಾಸಿಕ ಮಸೂದೆ ಪಾಸ್ ಆಗಿದೆ. ಪಾಕಿಸ್ತಾನ, ಬಾಂಗ್ಲಾ ದೇಶ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಂತಹವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕೆಲಸ ಆಗಿದ್ದು, ಇದು ಐತಿಹಾಸಿಕ ನಿರ್ಧಾರ. ಸಮಸ್ತ ಹಿಂದೂಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ನಾಯಕರು ಮಾಡಿದ್ದಾರೆ. ಅವರಿಗೆ ಸಮಸ್ತ ಜನತೆ ಪರವಾಗಿ ಧನ್ಯವಾದ ತಿಳಿಸಿದರು.
ಇನ್ನು, ಕೇಂದ್ರದ ಈ ನಡೆಯನ್ನು ವಿರೋಧಿಸಿರುವ ಕಾಂಗ್ರೆಸ್ಸಿಗರು ಪಾಕಿಸ್ತಾನದ ಏಜೆಂಟರಂತೆ ಮಾತನಾಡುತ್ತಾರೆ. ಅವರಿಗೇನಾದ್ರೂ ನ್ಯಾಯ, ನೀತಿ ಅನ್ನೋದು ಇದ್ರೆ ಇದಕ್ಕೆ ವಿರೋಧ ಮಾಡಬಾರದು ಎಂದು ಯತ್ನಾಳ್ ಹೇಳಿದ್ರು.