ವಿಜಯಪುರ:ತಮಗೆ ಹೈಕಮಾಂಡ್ನಿಂದ ಯಾವುದೇ ನೋಟಿಸ್ ಬಂದಿಲ್ಲ. ಇದೊಂದು ಮಾಧ್ಯಮ ಸೃಷ್ಟಿಯಾಗಿದೆ. ನಾನು ಶಾಸಕನಾಗಿರುವ ಕಾರಣ ಕೇಂದ್ರ ಶಿಸ್ತು ಸಮಿತಿ ವಿಚಾರಿಸಬೇಕು. ರಾಜ್ಯ ನಾಯಕರು ವಿಚಾರಿಸುವ ಹಕ್ಕಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಬಿಎಸ್ವೈ ಬಗ್ಗೆ ಗೌರವವಿದೆ:ಸದಾ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡುತ್ತಿದ್ದ ಯತ್ನಾಳ್, ಅವರ ಬಗ್ಗೆ ಅಪಾರ ಗೌರವ ಇದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಕೇಂದ್ರ ನಾಯಕರು ತಮ್ಮ ಜತೆ ಮಾತನಾಡಿದ್ದಾರೆ. ನಿಮ್ಮದೇ ಆದ ಗೌರವವಿದೆ. ಅದನ್ನು ಕಾಪಾಡಿಕೊಳ್ಳಿ. ಬಿಎಸ್ವೈ ಹಿರಿಯ ನಾಯಕರು. ಅವರ ಬಗ್ಗೆ ಅನಾವಶ್ಯಕವಾಗಿ ಮಾತನಾಡಬೇಡಿ ಎಂದಿದ್ದಾರೆ. ಇನ್ನು ಮುಂದೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನೀವೂ ಸಹ ಅವರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ಸಿಎಂ ಬದಲಾವಣೆಗೆ ಯಾರೂ ಪತ್ರ ಬರೆದಿಲ್ಲ:ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬದಲಾವಣೆ ಕೇವಲ ಊಹಾಪೋಹವಷ್ಟೇ ಅವರನ್ನು ಬದಲಿಸುವ ಚಿಂತನೆ ಎಲ್ಲಿಯೂ ನಡೆದಿಲ್ಲ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡಲು 70 ಶಾಸಕರು ಸಹಿ ಮಾಡಿದ್ದಾರೆ ಎನ್ನುವುದು ಸುಳ್ಳು. ಇನ್ನೇನು ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಈ ಸಮಯದಲ್ಲಿ ಸಿಎಂ ಬದಲಾವಣೆ ಮಾಡಲು ಯಾರೂ ಹೋಗುವುದಿಲ್ಲ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಎಂದರು.
ಮೊದಲು ಕ್ಷೇತ್ರ ಗಟ್ಟಿ ಮಾಡಿಕೊಳ್ಳಲಿ: ಪದೇ ಪದೆ ಪ್ರಧಾನಿ ಮೋದಿಯನ್ನು ರಾಜ್ಯಕ್ಕೆ ಕರೆಯಿಸಿಕೊಂಡು ಅವರ ಮುಖಾಂತರ ಬಿಜೆಪಿ ನಾಯಕರು ಮತಯಾಚಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅವರು ದೇಶದ ಪ್ರಧಾನಿ ಅವರನ್ನು ಕರೆಯಿಸಿ ಕೊಳ್ಳುವುದರಲ್ಲಿ ಏನು ತಪ್ಪಿದೆ?. ಸಿದ್ದರಾಮಯ್ಯ ಅವರು ಮೊದಲು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ದೃಢಪಡಿಸಿಕೊಳ್ಳಲಿ.