ವಿಜಯಪುರಕ್ಕೆ ಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಸ್ವಾಗತಿಸಲು ಬಾರದ ಯತ್ನಾಳ್ ವಿಜಯಪುರ: ಇಂದು ವಿಜಯಪುರದಲ್ಲಿ ಸಿದ್ದೇಶ್ವರ ಶ್ರೀಗಳ ಆಶ್ರಮಕ್ಕೆ ಹೋಗುವ ಅವಕಾಶ ಸಿಕ್ಕಿತು. ಈ ಪುಣ್ಯ ಭೂಮಿಗೆ ನಮಿಸುತ್ತೇನೆ. ನೀವೆಲ್ಲ ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಕಮಲ ಅರಳಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯು ಎಲ್ಲರ ವಿಕಾಸ ಮಂತ್ರ ಹಿಡಿದು ಹೊರಟಿದೆ. ಯಡಿಯೂರಪ್ಪ ಅವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು, ಬೊಮ್ಮಾಯಿ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಮುಂದುವರೆದಿವೆ ಎಂದು ಹೇಳಿದರು.
ಭಾರತದಿಂದಲೇ ಸ್ಮಾರ್ಟ್ ಫೋನ್ ತಯಾರಿ :ಭಾರತದಲ್ಲಿ 2014ರಲ್ಲಿ ಕೇವಲ 350 ಕಿಮೀ ಅಪ್ಟಿಕಲ್ ಕೇಬಲ್ ದೇಶದಲ್ಲಿ ಪಸರಿಸಿತ್ತು. ಇಂದು 2ಲಕ್ಷ ಕಿಲೋ ಮೀಟರ್ ವರೆಗೆ ಹೆಚ್ಚಾಗಿದೆ. ಮೊದಲು ಸ್ಮಾರ್ಟ್ ಫೋನ್ ತೆಗೆದುಕೊಂಡರೆ, ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರುತ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣುತ್ತಿದೆ. ಇದು ಬದಲಾವಣೆ ಪರ್ವ ಅಲ್ಲವೇ ಎಂದು ಹೇಳಿದರು. ಸ್ಟೀಲ್ ಉತ್ಪಾದನೆಯಲ್ಲಿ 14ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದೇವೆ. ಆಟೊಮೊಬೈಲ್‌ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.
12 ಕೋಟಿ ಮಹಿಳೆಯರಿಗೆ ನಿವಾಸ :ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ ದೇಶದ 12 ಕೋಟಿ ಮಹಿಳೆಯರಿಗೆ ಮನೆ ಕೊಡಲಾಗಿದೆ. ಕರ್ನಾಟಕದಲ್ಲಿ ಸುಮಾರು 27 ಲಕ್ಷ ಶೌಚಾಲಯ ಕೊಡುವ ಮೂಲಕ ಮಹಿಳಾ ಸಶಕ್ತಿಕರಣ ಮಾಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಯಾವುದೇ ಬಡವರು ನಿರಾಶ್ರಿತರಾಗಿರಬಾರದೆಂದು ಮೂರು ಕೋಟಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎಂಟು ಲಕ್ಷ ಮನೆ ಕೊಡಲಾಗಿದೆ. ಇನ್ನು, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಇಂದು ಭಾರತದ ಶೇ.50ರಷ್ಟು ಜನರು ಐದು ಲಕ್ಷ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಜಾರಿ ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 8 ಲಕ್ಷ ಜನರು ಎರಡು ಸಾವಿರ ಹಣ ಪಡೆಯುತ್ತಿದ್ದಾರೆ. ವಿಜಯಪುರದಲ್ಲಿ ಎರಡು ಲಕ್ಷ ರೈತರು ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಮೂರು ದಿನಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿ ಹಲವಾರು ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ. ವಂದೇ ಭಾರತ್ ಯೋಜನೆ ಯಲ್ಲಿ ಭಾರತದಲ್ಲಿ 400 ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ನಾನು ಬರುವಾಗ ನೋಡುತ್ತಿದ್ದೆ, ಪ್ರತಿ ರೋಡ್ಗಳು ನಾಲ್ಕು ಲೈನ್ ಗಳಿಂದ ಕೂಡಿವೆ. ಇನ್ಮುಂದೆ ಅವೆಲ್ಲ ಎಂಟು ಲೈನ್ ಗಳು ಆಗಲಿವೆ ಎಂದರು.
ಇನ್ನು, ಕರ್ನಾಟಕದಲ್ಲಿ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ದಲಿತರಿಗೆ, ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿದ್ದು ಬಹಳ ದೊಡ್ಡ ಕಾರ್ಯ. ಅಭಿವೃದ್ಧಿ ಎಂದರೆ ಬಿಜೆಪಿ, ಪಾರದರ್ಶಕತೆ ಎಂದು ಜೆ ಪಿ ನಡ್ಡಾ ಹೇಳಿದರು.
ವ್ಯಾಕ್ಸಿನ್ ಅವಶ್ಯ: ಭಾರತದಲ್ಲಿ ವ್ಯಾಕ್ಸಿನೇಷನ್ ಮೂಲಕ ಮೋದಿ ಸುರಕ್ಷಾ ಚಕ್ರ ಕೊಟ್ಟಿದ್ದಾರೆ. ಭಾರತದಿಂದ 100 ದೇಶಗಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ಅದರಲ್ಲಿ 50 ದೇಶಗಳಿಗೆ ಉಚಿತವಾಗಿ ಕೊಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದರು.
ಈ ಹಿಂದೆ ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು. ನಮ್ಮ ದೇಶದ ಪ್ರಧಾನಿ ಆ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ಮಾಡಿದರು. ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಗೆ ಕರೆ ಮಾಡಿ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದರು. ಕೆಲವರು ಏನೇನೋ ಮಾತಾಡ್ತಾರೆ, ಅವರ ಹೆಸರು ನಾನು ಹೇಳುವುದಿಲ್ಲ. ಅವರ ಉದ್ದೇಶ ಕುರ್ಚಿ, ಕುರ್ಚಿ, ಕುರ್ಚಿ. ಕರ್ನಾಟಕದ ಜನತೆ ಅವರಿಗೆ ನೋ ಕುರ್ಚಿ, ನೋ ಕುರ್ಚಿ, ನೋ ಕುರ್ಚಿ ಎನ್ನುವ ಮೂಲಕ ಅವರಿಗೆ ವಿಶ್ರಾಂತಿ ಕೊಡಿ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಜಯ ಸಂಕಲ್ಪ ಅಭಿಯಾನ ರಾಷ್ಟ್ರೀಯ ಅಧ್ಯಕ್ಷರ ಮೂಲಕ ಆರಂಭ ಆಗಿರುವುದು ನಮ್ಮ ಸೌಭಾಗ್ಯ. ಹಣಬಲ, ತೋಳ್ಬಲದಿಂದ ಅಧಿಕಾರಕ್ಕೆ ಬರೋ ಕಾಲವಿಲ್ಲ. ಇದನ್ನು ಕಾಂಗ್ರೆಸ್ ನವರು ಮರೆಯಬೇಕು. ಮೋದಿಜಿಯವರು ಜೆಪಿ ನಡ್ಡಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕಾಂಗ್ರೆಸ್ನಲ್ಲಿ ಕೆಲವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಮೋದಿ, ನಡ್ಡಾ, ಅಮಿತ್ ಶಾ ನೇತೃತ್ವದಲ್ಲಿ 140 ಕ್ಕೂ ಹೆಚ್ಚು ಸೀಟ್ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ದೇಶದಲ್ಲಿ ಸದ್ಯ ಬಿಜೆಪಿ ಪರ ಗಾಳಿ ಬೀಸುತ್ತಿದೆ. ಜೆಪಿ ನಡ್ಡಾ ಅವರು ಇಂದು ಕರ್ನಾಟಕಕ್ಕೆ ಬಂದು ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ ಎಂದರು.
ವಿದೇಶಿಯರು ಮೋದಿಯನ್ನು ಹೊಗಳುತ್ತಾರೆ: ವಿದೇಶಿಯವರು ಸಹ ಮೋದಿಯನ್ನು ಹೊಗಳುತ್ತಾರೆ. ಪಾಕಿಸ್ತಾನದ ಪ್ರಧಾನ ಮಂತ್ರಿಯೇ ಭಾರತವನ್ನು ಹೊಗಳುತ್ತಿದ್ದಾರೆ. ಭಾರತ ಹೇಗೆ ಅಭಿವೃದ್ಧಿ ಆಗುತ್ತಿದೆ ಎಂದು ನೀವೇ ಯೋಚನೆ ಮಾಡಿ. ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೂ ಸಿಗಬೇಕಾದ ಸೌಲಭ್ಯ ಸಿಗಬೇಕು ಎಂದು ಪ್ರಧಾನಿ ಮೋದಿಜಿ ಅವರೇ ಕರೆ ಕೊಟ್ಟಿದ್ದಾರೆ ಎಂದರು. ವಿಜಯಪುರ ಜಿಲ್ಲೆಯಲ್ಲಿ ಐದು ನದಿಗಳಿದ್ರೂ ಬರದ ನಾಡು ಎಂದು ಕರೆಸಿಕೊಳ್ಳುತ್ತಿತ್ತು. ನಾನು ಸಿಎಂ ಆದ ಮೇಲೆ ಎಲ್ಲಾ ಕಡೆ ನೀರಾವರಿ ಮಾಡಿ, ನೀರಾವರಿಯ ಅನುಕೂಲ ಮಾಡಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಗೆ ಬೆಂಬಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಬಿಎಸ್ವೈ ಮನವಿ ಮಾಡಿದರು.
ಯತ್ನಾಳ್ ಗೈರು: ವಿಜಯಪುರಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸ್ವಾಗತಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗಮಿಸದೇ ಗೈರಾಗಿದ್ದರು. ಯತ್ನಾಳ್ ಮತ್ತು ಸಚಿವ ನಿರಾಣಿ ನಡುವಿನ ಗುದ್ದಾಟ ಕುರಿತು ಕಾರಣ ಕೇಳಿ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ನಡ್ಡಾ ಭೇಟಿಗೆ ಯತ್ನಾಳ್ ಆಗಮಿಸದೇ ಮತ್ತೊಮ್ಮೆ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ :ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಭೇಟಿ ಕೊಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ