ವಿಜಯಪುರ :ಸಚಿವ ಮುರುಗೇಶ ನಿರಾಣಿ ಬಳಿ 500 ರಿಂದ 1000 ಸಿಡಿ ಇವೆ ಎಂದು ಉದ್ಯಮಿ ಆಲಂ ಪಾಷಾ ಗಂಭೀರ ಆರೋಪದ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಆಲಂ ಪಾಷಾ ಆರೋಪ ಕುರಿತು ಸಿಎಂ ಸಿಬಿಐ ತನಿಖೆಗೆ ಆದೇಶ ನೀಡಬೇಕು. ಸಿಡಿ ವಿಚಾರವಾಗಿ ಗಂಭೀರ ಆರೋಪವಿದ್ದರೆ ಅದರಿಂದ ಮುಕ್ತರಾಗಬೇಕು. ಇಲ್ಲವಾದರೆ ಸಚಿವ ಸ್ಥಾನದಲ್ಲಿ ಇರಲು ಹಾಗೂ ಸಿಎಂ ಹುದ್ದೆಗಾಗಿ ದೊಡ್ಡ ಪ್ರಮಾಣದಲ್ಲಿ ಅಮೀಷ ಒಡ್ಡಿದ್ದರ ಕುರಿತು ಹಾಗೂ ದೆಹಲಿಗೆ ಹೋಗುವುದು, ಬರುವುದರ ಕುರಿತು ಮಾಹಿತಿಯಿದೆ ಎಂದರು.
ಪಂಚಮಸಾಲಿ 2ಎ ಮೀಸಲಾತಿಗಾಗಿ ನಡೆದ ಹೋರಾಟ ಅಸ್ಥಿರಗೊಳಿಸಲು, ವಿಫಲಗೊಳಿಸಲು ಸಚಿವ ನಿರಾಣಿ ಪ್ರಯತ್ನ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದರು. ಇದು ನಾಡಿನ ಜನತೆಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ಸಿಎಂ ಅವರು ಸಿಬಿಐ ತನಿಖೆ ಮಾಡಿಸಬೇಕೆಂದು ಒತ್ತಾಯ ಮಾಡಿದರು. ನಿರಾಣಿ ಕುರಿತು ಇಂಥ ಗುರುತರ ಆರೋಪ ನನ್ನ ಬಳಿಯಿವೆ ಎಂದರು.
ಜಿಲ್ಲೆಯಲ್ಲಿ ಮುರುಗೇಶ್ ನಿರಾಣಿ ಸೌಹಾರ್ದ ಸಹಕಾರಿ ಹೆಸರಲ್ಲಿ ಮೋಸವಾಗಿದೆ. 40 ಕೋಟಿ ರೂಪಾಯಿ ಹಗರಣವಿದೆ. ಸೌಹಾರ್ದ ಸಹಕಾರಿ ನನ್ನದಲ್ಲಾ ಎಂದು ಈಗ ಕೋರ್ಟ್‌ನಿಂದ ಸ್ಟೇ ತೆಗೆದುಕೊಂಡು ಬಂದು ಹೇಳುತ್ತಿದ್ದಾರೆ. ನಿಮ್ಮ ಹೆಸರಲ್ಲಿ ಸೌಹಾರ್ದ ಸಹಕಾರಿ ಬೇಡವೆಂದು ನಿರಾಣಿಗೆ ಹಿಂದೆಯೇ ಹೇಳಿದ್ದೆ. ಆಗ ನನ್ನ ಮಾತು ಕೇಳಲಿಲ್ಲ, ಜಿಲ್ಲೆಯ ಜನರು ಮುರುಗೇಶ ನಿರಾಣಿ ಹೆಸರನ್ನು ನಂಬಿ ಹಣ ಇಟ್ಟಿದ್ದರು. ಈಗ ಸುಮಾರು 40 ಕೋಟಿ ರೂಪಾಯಿ ಹಗರಣವಾಗಿದೆ ಎಂದರು.