ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಸಿಎಂ ಬಿಎಸ್ವೈ ವಿರುದ್ಧ ತಮ್ಮ ವಾಕ್ಸಮರ ಮುಂದುವರೆಸಿದ್ದಾರೆ.
ವಿಜಯಪುರದಲ್ಲಿ ಹನುಮಾನ್ ದೇವಸ್ಥಾನದ ಕಾಂಪೌಂಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯಪುರದ ವಾರ್ಡ್ 3ರಲ್ಲಿ ನಡೆದ ಹನುಮಾನ್ ದೇವಸ್ಥಾನದ ಕಾಂಪೌಂಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ಸಿಎಂ ಬಿ.ಎಸ್.ಯಡಿಯೂರಪ್ಪನವರ ಮೇಲೆ ಕೇಂದ್ರ ಸರ್ಕಾರದವರಿಗೂ ಬೇಸರವಿದೆ. ಅವರು ಅನುದಾನವನ್ನು ಕೇವಲ ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ' ಎಂದು ಆರೋಪಿಸಿದರು.
'ಉಮೇಶ ಕತ್ತಿ ಕೂಡ ಈ ಕುರಿತು ಮಾತನಾಡಿದ್ದಾರೆ. ಅವರೇನು ಶಿವಮೊಗ್ಗದ ಮುಖ್ಯಮಂತ್ರಿಯೋ ಅಥವಾ ಕರ್ನಾಟಕದ ಮುಖ್ಯಮಂತ್ರಿಯೋ ಎಂದು ಪ್ರಶ್ನಿಸಿದ್ದಾರೆ. ಹಾಗಾಗಿ ಸಿಎಂ ಖುರ್ಚಿಯ ಮೇಲೆ ಅವರು ಬಹಳ ದಿನ ಇರುವುದಿಲ್ಲ' ಎಂದು ವಾಗ್ದಾಳಿ ಮಾಡಿದರು.
'ನಮ್ಮ ಉತ್ತರ ಕರ್ನಾಟಕದವರೇ 100 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ. ಆದರೆ, ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೇ ಒಬ್ಬರು ಸಿಎಂ ಆಗ್ತಾರೆ. ಮುಂದಿನ ಬಾರಿ ಉತ್ತರ ಕರ್ನಾಟಕದರು ಸಿಎಂ ಆಗೋದು ಪಕ್ಕಾ' ಎಂದು ಭವಿಷ್ಯ ನುಡಿದರು.
'ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಈಗಾಗಲೇ ನನಗೂ ಹಾಗೂ ಸಿಎಂ ಬಿಎಸ್ವೈಗೆ ಜಗಳ ಶುರುವಾಗಿದೆ. ನನ್ನ ಮತಕ್ಷೇತ್ರದ 125 ಕೋಟಿ ರೂ. ಅನುದಾನ ಕಡಿತದಲ್ಲಿ ಒಂದು ಬಾರಿ ಸಿಎಂ ವಿರುದ್ಧ ಜಗಳ ಆಗಿದೆ' ಎಂದು ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.