ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದರಾಜ್ಯ ಕಾಂಗ್ರೆಸ್ ಸರ್ಕಾರ ಜನತೆಗೆ ಉಚಿತ ಗ್ಯಾರಂಟಿ ಹೆಸರಿನಲ್ಲಿ ದ್ರೋಹ ಎಸಗುತ್ತಿದ್ದು, ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಇಂದು ಜಿಲ್ಲಾಡಳಿತದ ಅಂಗವಾಗಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ಅವರು ಮಾತನಾಡಿದರು.
ಗ್ಯಾರಂಟಿ ಹಾಗೂ ಭಾಗ್ಯಗಳ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡುವಂತೆ ಕಾಂಗ್ರೆಸ್ ಸರ್ಕಾರ ಯಾವುದೇ ಯೋಜನೆಗಳನ್ನು ಕಾರ್ಯರೂಪದಲ್ಲಿ ತಂದಿಲ್ಲ. ತನ್ನ ತಪ್ಪು ಮುಚ್ಚಿಕೊಳ್ಳುವ ನೆಪದಲ್ಲಿ ಹುಲಿ ಉಗುರು, ಜಿಲ್ಲೆಯ ಹೆಸರು ಬದಲಾವಣೆಯಂತಹ ಕೆಲಸಕ್ಕೆ ಕೈಹಾಕುವ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುತ್ತಿದೆ. ಸರ್ಕಾರ ಪತನದ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ ಮಾತು ನಿಜ ಅನ್ನಿಸುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ತಮ್ಮ ಸರ್ಕಾರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ಮತ್ತು ಆಪರೇಷನ್ ಕಮಲ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಅನ್ನೋದನ್ನು ಅವರು ಬಹಿರಂಗ ಮಾಡಲಿ. ತಮ್ಮ ಬಳಿ ವಿಡಿಯೋ ಮತ್ತು ಆಡಿಯೋ ಇದೆ ಎನ್ನುತ್ತಿದ್ದಾರೆ. ಇದ್ದರೆ ಬಹಿರಂಗಪಡಸಲಿ ಎಂದು ಸವಾಲು ಹಾಕಿದರು.