ವಿಜಯಪುರ : ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವುದು ಕಾಂಗ್ರೆಸ್ ಸೃಷ್ಟಿ. ನಮ್ಮಲ್ಲಿ ಯಾವುದೇ ಆಪರೇಷನ್ ಹಸ್ತವಾಗುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇಂದು (ಸೋಮವಾರ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಲ್ಲಿದ್ದಾಗ ಮಂತ್ರಿ ಸೇರಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಧಿಕಾರ ಅನುಭವಿಸಿದ್ದಾರೆ. ಪ್ರಧಾನಿ ಮೋದಿ ಕಾಲದಲ್ಲಿ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಮೋದಿ ವಿಶ್ವನಾಯಕ, ದೇಶವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆಪರೇಷನ್ ಹಸ್ತ ಕೇವಲ ಕಾಂಗ್ರೆಸ್ ಸೃಷ್ಟಿ ಅಷ್ಟೇ ಎಂದರು.
ರಾಜ್ಯದಲ್ಲಿ 135 ಸ್ಥಾನಗಳಿಸಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಆದರೂ ಆ ನಾಯಕರಲ್ಲಿ ಭಯವೇಕೆ ಎಂದು ಅರ್ಥವಾಗುತ್ತಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎನ್ನುವ ಭಯದಲ್ಲಿ ಬಿಜೆಪಿ ಮಾಜಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಈಗ ಬಿಜೆಪಿಯಿಂದ ಯಾರು ಹೋಗಿದ್ದಾರೆ ಎಂದು ಪ್ರಶ್ನಿಸಿದ ಅವರು, ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್, ರೇಣುಕಾಚಾರ್ಯ, ಶಂಕರ ಪಾಟೀಲ ಮುನೇನಕೊಪ್ಪ ಇವರು ಯಾರೂ ಹೋಗುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಬಿಜೆಪಿಯಲ್ಲೇ ಇರುತ್ತಾರೆ. ಕೆಲವು ನಾಯಕರು ಸಿಎಂ ಭೇಟಿಯಾಗುತ್ತಿರುವುದು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದವೇ ಹೊರತು ರಾಜಕೀಯವಾಗಿ ಮಾತನಾಡಲು ಅಲ್ಲ ಎಂದು ಯತ್ನಾಳ್ ತಿಳಿಸಿದರು.