ಮುದ್ದೇಬಿಹಾಳ: ಕೊರೊನಾ ವೈರಸ್‌ನ ಹಾವಳಿಯ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ನಿತ್ಯ 80 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ನಾಲ್ಕು ಕೋಟಿ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ನೂತನ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆ ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶ್ರೀಗಳ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ದಾಸೋಹ ನಿಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕುಂಟೋಜಿ ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವವನ್ನು ನನ್ನ ನೇತೃತ್ವದಲ್ಲೇ ಅದ್ದೂರಿಯಿಂದ ನಡೆಸಲು ಸಿದ್ಧನಿದ್ದೇನೆ. ಕುಂಟೋಜಿ ಸೇರಿ ತಾಲೂಕಿನ ಜನರು, ಮಠಾಧೀಶರು ಈ ಕಾರ್ಯಕ್ಕೆ ಸಹಕರಿಸಬೇಕು. ಇದರ ನೇತೃತ್ವವನ್ನು ಇಟಗಿಯ ಗುರುಶಾಂತವೀರ ಶಿವಾಚಾರ್ಯರು ವಹಿಸಿಕೊಳ್ಳಬೇಕೆನ್ನುವುದು ತಮ್ಮ ಅಪೇಕ್ಷೆಯಾಗಿದೆ ಎಂದರು.