ವಿಜಯಪುರ: ನಗರದ ಹೊರವಲಯದ ಕರಾಡದೊಡ್ಡಿ-ಭೂತನಾಳ ಮಾನವನಿರ್ಮಿತ ಅರಣ್ಯ ಪ್ರದೇಶದಲ್ಲಿರುವ ವೀಕ್ಷಣಾ ಗೋಪುರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇದೆ ಎನ್ನುವ ಕಾರಣಕ್ಕೆ ಕೋಟಿ ವೃಕ್ಷ ಅಭಿಯಾನ ಆರಂಭಿಸಿ, ಎಲ್ಲೆಡೆ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸವನ್ನು ಮಾಜಿ ಸಚಿವ ಎಂ.ಬಿ.ಪಾಟೀಲ್ ಮಂತ್ರಿಯಾಗಿದ್ದಾಗ ಆರಂಭಿಸಿದ್ದರು. ಕೋಟಿ ವೃಕ್ಷ ಅಭಿಯಾನದಡಿ ಲಕ್ಷಾಂತರ ಸಸಿಗಳನ್ನು ನೆಡಲಾಗಿತ್ತು. ಇದಕ್ಕೆ ರಾಯಭಾರಿಯಾಗಿ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಕಾರ್ಯ ನಿರ್ವಹಿಸಿದ್ದರು.
ವೀಕ್ಷಣಾ ಗೋಪುರಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು ಸರ್ಕಾರದ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ರೈತರು, ಈ ಕಾರ್ಯಕ್ಕೆ ಕೈ ಜೋಡಿಸಿದ್ದು, ವರ್ಷದಿಂದ ವರ್ಷಕ್ಕೆ ಈ ಅಭಿಯಾನ ಯಶಸ್ಸು ಪಡೆಯುತ್ತದೆ. ಭೂತನಾಳ ಕೆರೆ ಪಕ್ಕದ 500 ಎಕರೆ ಪ್ರದೇಶದಲ್ಲಿರುವ ಬರಡು ಭೂಮಿಯಲ್ಲಿ ಅರಣ್ಯ ಬೆಳೆಸಿ, ಸುಂದರ ಪರಿಸರ ವೀಕ್ಷಿಸಲು ಅಲ್ಲಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಇದೀಗ ಇಲ್ಲಿರುವ ಒಂದು ವೀಕ್ಷಣಾ ಗೋಪುರಕ್ಕೆ ಬೆಂಕಿ ಇಟ್ಟಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನೀರಾವರಿ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗ ವತಿಯಿಂದ ನಿಯೋಜಿಸಿದ್ದ ಕಾವಲುಗಾರರನ್ನು ಹಿಂಪಡೆದಿದೆ. ಕಾವಲುಗಾರರು ಇಲ್ಲದಿರುವುದನ್ನೇ ಲಾಭ ಮಾಡಿಕೊಂಡು ಕೆಲವರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಸ್ಥಳಕ್ಕೆ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.