ವಿಜಯಪುರ :ರಾಜ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಜಿಲ್ಲೆಯ ನಿಂಬೆ ಹಣ್ಣಿನ ಉತ್ಪನ್ನದ ಉಪ್ಪಿನಕಾಯಿ ಮಾರಾಟ ಸಾಧ್ಯವಿಲ್ಲ. ಬೇಕಾದರೆ ಶಾಲೆ, ಅಂಗನವಾಡಿ ಕೇಂದ್ರದಲ್ಲಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದರು.
ನ್ಯಾಯ ಬೆಲೆ ಅಂಗಡಿಯಲ್ಲಿ ಉಪ್ಪಿನಕಾಯಿ.. ಸಚಿವ ಉಮೇಶ ಕತ್ತಿ ಈ ಕುರಿತು ಹೀಗೆ ಹೇಳಿದಾರೆ.. ನಗರದ ತೊರವಿ ರಸ್ತೆಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನ ಶಕ್ತಿ ಆವರಣದಲ್ಲಿ ನಡೆದ 73ನೇ ಗಣರಾಜೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಉಪ್ಪಿನಕಾಯಿ ನೀಡುವ ಕುರಿತು ಶಿಕ್ಷಣ ಇಲಾಖೆ ಜತೆ ಚರ್ಚೆ ನಡೆಸಲಾಗುವುದು.
ಪಡಿತರ ಧಾನ್ಯ ವಿತರಣೆಯಲ್ಲಿ ಸದ್ಯ ಜೋಳ, ರಾಗಿ, ಅಕ್ಕಿ ಇದೆ. ಇದರ ಜತೆ ಉಪ್ಪಿನಕಾಯಿ ಮಾರಾಟ ಮಾಡಲು ಸಾಧ್ಯವಿಲ್ಲ. ನಿಂಬೆ ಅಭಿವೃದ್ಧಿ ಮಂಡಳಿಯ ಬೇಡಿಕೆ ತಮ್ಮ ಬಳಿ ತಲುಪಿದೆ. ನಿಂಬೆ ಯಾವ ರೀತಿ ರಫ್ತು ಮಾಡಬಹುದು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.
ಆರುವರೆ ಲಕ್ಷ ಟನ್ ಜೋಳ, ಆರುವರೆ ಲಕ್ಷ ಟನ್ ರಾಗಿ ಬೇಕು. ಸದ್ಯ ರಾಗಿ ಎರಡು ಲಕ್ಷ ಟನ್ ಅಷ್ಟೇ ಕಲೆಕ್ಟ್ ಆಗಿದೆ. ಜೋಳ 70 ಸಾವಿರ ಟನ್ ಕಲೆಕ್ಟ್ ಆಗಿದೆ. ಬೇಕಾದಷ್ಟು ರಾಗಿ, ಜೋಳ ಸಂಗ್ರಹಣೆಯಾಗದಿರುವ ಕಾರಣ ಹಂಚಿಕೆ ಮಾಡಲು ಕಷ್ಟವಾಗಿದೆ.
ಹೀಗಾಗಿ, ಅಕ್ಕಿಯನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೂ ಸ್ಥಳೀಯ ಎಂಎಸ್ ಬೆಲೆ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಪಡಿತರದಾರರಿಗೆ ಐದು ಕೆಜಿ ಅಕ್ಕಿ, ಒಂದು ಕೆಜಿ ರಾಗಿ, ಒಂದು ಕೆಜಿ ಜೋಳ ವಿತರಣೆ ಮಾಡಲಾಗುತ್ತಿದೆ ಎಂದರು.
ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಕತ್ತಿ, ನಮ್ಮಲ್ಲಿ ಯಾವುದೇ ಗುಪ್ತ ಸಭೆಯಾಗಲಿ, ಬಹಿರಂಗ ಸಭೆಗಳಾಗಲಿ ನಡೆದಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯ ಮಹಾಂತೇಶ್ ಕವಟಗಿಮಠ ಸೋಲಿನ ಚರ್ಚೆ ನಡೆದಿದೆ. ಜೊತೆಗೆ ಮುಂಬರುವ ಜಿಪಂ,ತಾಪಂ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂದು 10 ಶಾಸಕರು ಸೇರಿ ಚರ್ಚೆ ಮಾಡಿದ್ದೇವೆ ಎಂದರು.
ಜಾರಕಿಹೊಳಿ ಬ್ರದರ್ಸ್ ವಿಚಾರ : ಇಲ್ಲಿ ಬ್ರದರ್ಸ್ ಯಾರು ಇಲ್ಲ, ಎಲ್ಲರೂ ಬಿಜೆಪಿ ಶಾಸಕರೇ ಎನ್ನುವ ಮೂಲಕ ಬೆಳಗಾವಿ ಬಿಜೆಪಿ ಭಿನ್ನ ಮತಕ್ಕೆ ಸಚಿವ ಕತ್ತಿ ಟಾಂಗ್ ನೀಡಿದರು. ನನಗೂ ಒಬ್ಬ ತಮ್ಮ, ಅಣ್ಣ ಇದ್ದಾರೆ. ಇವರೆಲ್ಲ ಮನೆಯಲ್ಲಿ ಇರಬಹುದು. ಆದರೆ, ಬಿಜೆಪಿ ನಮ್ಮ ಮಾತೃ ಪಕ್ಷ, ಅದನ್ನು ಎಲ್ಲರೂ ಸೇರಿ ಬೆಳೆಸುವ ಮೂಲಕ ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು ಎಂದರು.
ಜಾಹೀರಾತು :ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ