ವಿಜಯಪುರ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈಗ 80 ವರ್ಷ. ಹೀಗಾಗಿ ಚುನಾವಣೆ ನಿವೃತ್ತಿ ಘೋಷಣೆ ಮಾಡಿರಬಹುದು. ಆದರೆ, ಅವರಿಗೆ ದುಡಿಯುವ ತಾಕತ್ತು ಇನ್ನೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕುಟುಂಬ ರಾಜಕಾರಣ: ಕುಟುಂಬ ರಾಜಕಾರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಮ್ಮ ಪಕ್ಷದಲ್ಲಿ 75ವರ್ಷ ವಯಸ್ಸಾದವರು ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು ಎನ್ನುವ ನಿಯಮವಿದೆ. ಈ ಕಾರಣಕ್ಕೆ ಹಾಗೂ ಮಗನ ಬೆಳೆಸುವ ನಿಟ್ಟಿನಲ್ಲಿ ಬಿಎಸ್ವೈ ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿರಬಹುದು ಎಂದರು.
ನಾನು ಸಹ ಕುಟುಂಬ ರಾಜಕಾರಣದಿಂದ ಬಂದಂತಹ ವ್ಯಕ್ತಿ. ಕುಟುಂಬ ರಾಜಕಾರಣ ಸರ್ವೇಸಾಮಾನ್ಯ. ಪ್ರಧಾನಿ ಮೋದಿ ಅವರನ್ನು ಹೊರತುಪಡಿಸಿ ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರೇ. ನಮ್ಮ ತಂದೆಯವರು ನಮ್ಮನ್ನು ರಾಜಕೀಯಕ್ಕೆ ತಂದರು. ಹಾಗೆಯೇ ಬಿಎಸ್ವೈ ಅವರು ವಿಜಯೇಂದ್ರ ಅವರನ್ನು ರಾಜಕೀಯಕ್ಕೆ ತರುತ್ತಿದ್ದಾರೆ. ಮುಂದೆ ವಿಜಯೇಂದ್ರ ಇದೇ ಸಂಸ್ಕೃತಿ ಬೆಳೆಸಿಕೊಂಡು ಹೋಗಬಹುದು ಎನ್ನುವ ಮೂಲಕ ಬಿಎಸ್ವೈ ನಡೆಯನ್ನು ಪರೋಕ್ಷವಾಗಿ ಸಚಿವ ಕತ್ತಿ ಸಮರ್ಥಿಸಿಕೊಂಡರು.
ಸಿಎಂ ಕುರ್ಚಿಗಾಗಿ ಕಾದಾಟ: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಲ್ಲ ಎನ್ನುವ ಸತ್ಯವನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಆಗಲಿ ಅಥವಾ ಡಿ.ಕೆ. ಶಿವಕುಮಾರ್ ಆಗಲಿ ಇವರಿಬ್ಬರಲ್ಲಿ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.