ವಿಜಯಪುರ:ಈವರೆಗೆ ಆಳಿದ ಯಾವುದೇ ಸರ್ಕಾರವಿರಲಿ, ಬಸವಣ್ಣನ ಜನ್ಮಭೂಮಿ ಬಗ್ಗೆ ಕಾಳಜಿ ವಹಿಸದಿರುವುದು ಬೇಸರ ತರಿಸಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು, ಸಚಿವರು ಸೇರಿ ಗುದ್ದಾಡಿ ಅನುದಾನ ತರಬೇಕಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ಮರುನಾಮಕರಣ ಮಾಡುವ ವಿಚಾರ ಸಂಬಂಧ ಶನಿವಾರ ನಗರದಲ್ಲಿ ಮಾತನಾಡಿರುವ ಅವರು, ಬಸವೇಶ್ವರರ ಹೆಸರು ಈಗಾಗಲೇ ಪ್ರಚಲಿತದಲ್ಲಿದೆ. ಬಸವಣ್ಣನವರು ಹುಟ್ಟಿದ್ದು ಇದೇ ಜಿಲ್ಲೆಯಲ್ಲಿ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ, ಬರಿ ಹೆಸರು ಬದಲಾವಣೆ ಮಾಡುವುದರಿಂದ ಅವರ ಹಿರಿಮೆ ಮತ್ತು ಗರಿಮೆ ಪರಿಚಯಿಸೋದು ಕಷ್ಟ. ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಬೇಕಿದೆ. ಕೂಡಲಸಂಗಮ, ಬಸವ ಜನ್ಮಭೂಮಿಯೂ ಕೂಡ ಅಭಿವೃದ್ಧಿ ಆಗಿಲ್ಲ. ಅದರ ಕಡೆ ಗಮನ ಕೊಡಬೇಕೆಂದು ಒತ್ತಾಯಿಸಿದರು.
ನಾನು ಬಸವಣ್ಣನ ಅಭಿಮಾನಿ ಎಂದು ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರೆ ಅದು ಸಾಧನೆ ಆಗಲ್ಲ. ಯಾರೇ ಮುಖ್ಯಮಂತ್ರಿ ಆಗಲಿ, ಅವರ ಬಳಿ ಅಧಿಕಾರ, ಅವಕಾಶವಿದ್ದಾಗ ಬಸವಣ್ಣನ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಮಾಡಬೇಕು. ಜಗತ್ತಿಗೆ ತೋರಿಸುವ ಕೆಲಸ ಬಸವಣ್ಣನವರ ಜನ್ಮ ಸ್ಥಳದಲ್ಲಿ ಆಗಬೇಕಿದೆ. ಮರುನಾಮಕರಣ ಈ ಸಂದರ್ಭದಲ್ಲಿ ಮಾಡೋದು, ಬಸವೇಶ್ವರರ ಹೆಸರು ಜಿಲ್ಲೆಗೆ ಇಟ್ಟಮೇಲೆ ಹೆಸರು ಹೇಳೋದು ಕಷ್ಟವಾಗುತ್ತೆ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೆ ಬಸವೇಶ್ವರ ಎಂದು ಮರುನಾಮಕರಣ ಮಾಡುವ ಅವಶ್ಯಕತೆ ಇಲ್ಲ. ಕೇವಲ ರಾಜಕೀಯ ಗಿಮಿಕ್ ಮಾಡಲು ಮರುನಾಮಕರಣ ಮಾಡೋದು ಕೂಡ ತಪ್ಪು ಎಂದರು.