ವಿಜಯಪುರ: "ರೈತರು ಬರಗಾಲ ಬರಲಿ ಎಂದು ಬಯಸುತ್ತಾರೆ" ಎಂಬ ರೀತಿಯಲ್ಲಿ ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಲಾಗಿದೆ. ಆದರೆ, ನಾನು ಆ ಅರ್ಥದಲ್ಲಿ ಹೇಳಿಲ್ಲ. ಸರ್ಕಾರಗಳ ನೀತಿಗಳು ರೈತರಿಗೆ ಮಾರಕವಾಗುತ್ತಿವೆ. ಇದರಿಂದ ರೈತರ ಬೆಳೆಗಳಿಗೆ ಮೂರು ವರ್ಷಗಳಿಗೊಮ್ಮೆ ಧಾರಣೆ (ಬೆಲೆ) ಬರುತ್ತದೆ. ಅದಕ್ಕೆ ಮೇಲಿಂದ ಮೇಲೆ ಬರಗಾಲ ಬಿದ್ದರೆ, ಸಾಲ ಮನ್ನಾವಾಗಬೇಕೆಂಬ ಬೇಡಿಕೆ ಸ್ವಾಭಾವಿಕವಾಗಿ ಬರುತ್ತದೆ. ಇದರ ಬದಲಿಗೆ ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಶಕ್ತಿ ಬರಬೇಕೆಂಬ ನಿಟ್ಟಿನಲ್ಲಿ ನಾನು ಮಾತನಾಡಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ನಗರದ ತಮ್ಮ ಗೃಹಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ರೈತರು ಸ್ವಾವಲಂಬಿಗಳಾಗಿ ಬದುಕಬೇಕು. ಯಾವುದೇ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿ ಬದುಕಬಾರದು. ಇದು ನನ್ನ ಹೇಳಿಕೆಯಾಗಿತ್ತು. ಇದರಂತೆ ಸರ್ಕಾರಗಳ ನೀತಿ ನಿರೂಪಣೆ ಇರಬೇಕು. ಆ ರೀತಿ ಕರ್ನಾಟಕ ಸರ್ಕಾರದ ಎಲ್ಲ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದಾರೆ. ರೈತರಿಗೆ ನೀರು, ವಿದ್ಯುತ್, ರಸಗೊಬ್ಬರ, ಬೀಜದ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದಾರೆ. ಆದರೆ, ದುರ್ದೈವವಶಾತ್ ಕೇಂದ್ರ ಸರ್ಕಾರದ ಇತ್ತೀಚಿನ ನೀತಿಗಳು ರೈತರಿಗೆ ಮಾರಕವಾಗಿವೆ'' ಎಂದು ಟೀಕಿಸಿದರು.
''ಉದಾಹರಣೆಗೆ, ಎಪಿಎಂಸಿ ತಿದ್ದುಪಡಿ ಕಾಯ್ದೆ. ಇದರ ವಿರುದ್ಧ ಇಡೀ ದೇಶದಲ್ಲಿ ರೈತರು ಪ್ರತಿಭಟನೆ ಮಾಡಿದರು. ಕರ್ನಾಟಕದಲ್ಲಿ ಈ ಕಾಯ್ದೆಯನ್ನು ಬಿಜೆಪಿಯವರು ಯಾಕೆ ತಂದಿದ್ದರು'' ಎಂದ ಪ್ರಶ್ನಿಸಿದ ಅವರು, ''ವಿರೋಧ ಪಕ್ಷದ ನಾಯಕರು ನನಗೆ ಮದ ಏರಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನನಗೆ ಮದ ಏರಿಲ್ಲ, ರೈತರನ್ನು ತುಳಿಯುವಂತಹ ಜನರಿಗೆ ಏರಿದೆ'' ಎಂದು ಕಿಡಿಕಾರಿದರು.
''ಇವತ್ತು ಕೇಂದ್ರ ಸರ್ಕಾರ ಸಕ್ಕರೆ ರಫ್ತು ಬ್ಯಾನ್ ಮಾಡಿದೆ. ಕೊಬ್ಬರಿಗೆ ಬೆಲೆ ಇಲ್ಲ, ದೇವೇಗೌಡರೇ ಒಂದು ಮನವಿ ಹಿಡ್ಕೊಂಡು ಪ್ರಧಾನಮಂತ್ರಿಗಳ ಬಳಿ ಹೋಗಿದ್ದಾರೆ. ರೈತ ಇಂದು ಅಕ್ಕಿ ಬೆಳೆದರೆ, ಅಕ್ಕಿ ರಫ್ತು ಆಗುತ್ತಿಲ್ಲ. ಅಲ್ಲದೇ, ಎಥೆನಾಲ್ ನೀತಿ ತಂದಿದ್ದಾರೆ. ಇದರಿಂದ ಕೆಲವರು 400–500 ಕೋಟಿ ರೂ. ಸಾಲ ತೆಗೆದು ಕಾರ್ಖಾನೆ ಆರಂಭಿಸಿದ್ದಾರೆ. ಆದರೆ, ಮೊನ್ನೆ ಎಥೆನಾಲ್ ಬ್ಯಾನ್ ಎಂಬ ಆದೇಶ ಬಂದಿದೆ. ಇವತ್ತು ಈರುಳ್ಳಿ ರಫ್ತು ಬ್ಯಾನ್ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಉಳ್ಳಾಗಡ್ಡಿ ಹೆಚ್ಚಾಗಿ ಬೆಳೆಯುತ್ತೇವೆ. ಈ ಈರುಳ್ಳಿ ರಫ್ತು ಮಾಡಿದರೆ ನಾಲ್ಕು ದುಡ್ಡು ಸಿಗ್ತಿತ್ತಿಲ್ಲೋ?, ಇಂಥವೆಲ್ಲಾ ನೀತಿಗಳಿಂದ ರೈತರಿಗೆ ಮೂರು ವರ್ಷಕ್ಕೊಮ್ಮೆ ಧಾರಣೆ ಬರುತ್ತದೆ. ಯಾವುದೇ ಬೆಳೆಗೆ ಧಾರಣೆ ಬಂದಾಗ ನಾಲ್ಕು ದುಡ್ಡು ರೈತರು ಗಳಿಸಿಕೊಳ್ಳುತ್ತಾರೆ. ಆದರೆ, ಅಕ್ಕಿ ಬ್ಯಾನ್, ಶುಗರ್ ಬ್ಯಾನ್ ಅಂತಾ ಮಾಡಿದರೆ, ಮತ್ತೆ ರೈತರು ಯಾವಾಗ ದುಡ್ಡು ಗಳಿಸುತ್ತಾರೆ?. ಇಂತಹ ನೀತಿಗಳನ್ನು ತರುವವರು ರೈತರ ಪರ ಚಿಂತನೆ ಮಾಡುವಂಥವರಲ್ಲ'' ಎಂದು ಹೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು.