ವಿಜಯಪುರ:ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಂದು ಇಲ್ಲಿನ ಬುರಾಣಪುರ ಗ್ರಾಮದ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಟರ್ಮಿನಲ್ ಕಟ್ಟಡ, ರನ್‌ವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಗಳೂ ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಎಲ್ಲ ಕಾಮಗಾರಿಗಳು ಮುಗಿದು ವಿಮಾನಗಳ ಹಾರಾಟ ನಡೆಯಲಿದೆ. ಜನವರಿಯಲ್ಲಿ ನಾಗರಿಕ ವಿಮಾನಯಾನ ಪ್ರಾಧಿಕಾರದವರು (ಡಿಜಿಸಿಎ) ಪರಿವೀಕ್ಷಣೆ ನಡೆಸಲಿದ್ದಾರೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸೇರಿದಂತೆ ಬಾಕಿ ಇರುವ ಎಲ್ಲ ಲೋಕೋಪಯೋಗಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಲು ಸೂಚಿಸಲಾಗಿದೆ. ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗಲಿದೆ. ವಿಮಾನಗಳ ಹಾರಾಟದಿಂದ ಸಮಯದ ಉಳಿತಾಯದೊಂದಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟಿಗೂ ಉತ್ತೇಜನ ದೊರೆಯಲಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ನಿಲ್ದಾಣದಲ್ಲಿ ಎರಡು ಉಪ ಕಾಮಗಾರಿಗಳಾಗಿ ವಿಂಗಡಿಸಲಾಗಿದೆ. ಸಿವಿಲ್ ಕಾಮಗಾರಿಗಾಗಿ 105.60 ಕೋಟಿ ರೂ.ಗಳು ಹಾಗೂ ಏವಿಯೋನಿಕ್ಸ್/ಸೆಕ್ಯೂರಿಟಿ ಉಪಕರಣಗಳ ಕಾಮಗಾರಿಗಾಗಿ 19.40 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಸಿವಿಲ್ ಕಾಮಗಾರಿಯು 105.60. ಕೋಟಿಗಳಲ್ಲಿ 86.20 ಕೋಟಿಗಳ ಮೊತ್ತದಲ್ಲಿ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಪ್.ಆರ್. ಕಟ್ಟಡ, ಕಾಂಪೌಂಡ್ ಗೋಡೆ ಹಾಗೂ ಇತರೆ ಕಾಮಗಾರಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ತಿಳಿಸಿದರು.
ಸಿವಿಲ್ ಉಪಕಾಮಗಾರಿಗಳಲ್ಲಿ ಉಳಿದ ಮೊತ್ತ 19.40 ಕೋಟಿಗಳಲ್ಲಿ ವಿವಿಧ ಉಪಕಾಮಗಾರಿಗಳಿದ್ದು, ಮೊದಲನೇಯದಾಗಿ ರೂ.1.39 ಕೋಟಿ ಮೊತ್ತದಲ್ಲಿ ವಿಮಾನ ನಿಲ್ದಾಣ ಆವರಣದಲ್ಲಿರುವ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವುದನ್ನು ಪರಿಗಣಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡಿದೆ. 5.94 ಕೋಟಿ ರೂ. ಮೊತ್ತದಲ್ಲಿ ವಿಮಾನ ನಿಲ್ದಾಣಕ್ಕೆ 24/7 ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. 3.65 ಕೋಟಿ ರೂ. ಮೊತ್ತದ ವಿಮಾನ ನಿಲ್ದಾಣಕ್ಕೆ 2000 ಕಿ.ಲೋ.ವ್ಯಾಟ್ ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಮೊತ್ತದ ಕಾಮಗಾರಿಯ ಮೇಲ್ವಿಚಾರಣೆ ಮಾಡುವ ತಾಂತ್ರಿಕ ಸಂಸ್ಥೆಗೆ ಶುಲ್ಕ ಪಾವತಿ ಮಾಡುವುದು ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.
ಬೆಳಗಾವಿ ಇಬ್ಭಾಗದ ಬಗ್ಗೆ ಪ್ರಸ್ತಾಪ: ಬೆಳಗಾವಿ ಸೇರಿ ಮೂರು ಜಿಲ್ಲೆ ಮಾಡ್ತೀವಿ. ಬೆಳಗಾವಿ ಜೊತೆಗೆ ಚಿಕ್ಕೋಡಿ, ಗೋಕಾಕ ಎಂಬುದು ಮೂರು ಜಿಲ್ಲೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಇನ್ನೂ ಈ ಬಗ್ಗೆ ಚರ್ಚೆಗಳಾಗಿಲ್ಲ ಎಂದರು. ಇದೇ ವೇಳೆ ಪಕ್ಕದಲ್ಲಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಇಂಡಿ ಸಹ ಜಿಲ್ಲೆ ಆಗಬೇಕೆಂದು ಹೇಳಿದರು.