ವಿಜಯಪುರ: ಮಹಾಮಳೆ ಆರ್ಭಟಕ್ಕೆ ಭೀಮಾ ನದಿ, ಡೋಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಲಕ್ಷಾಂತರ ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಅನ್ನದಾತರನ್ನು ಕಂಗಾಲಾಗಿಸಿದೆ. ನೂರಾರು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಷ್ಟೆಲ್ಲ ಆದರೂ ಸ್ಥಳಕ್ಕೆ ಭೇಟಿ ನೀಡದ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದರು.
ನೆರೆಪೀಡಿತ ಪ್ರದೇಶಗಳಿಗೆ ಶಶಿಕಲಾ ಜೊಲ್ಲೆ ಭೇಟಿ: ಜನತೆ ಆಕ್ರೋಶ
ವಿಜಯಪುರದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು. ಸಚಿವೆ ಕಾಟಾಚಾರಕ್ಕೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಸಚಿವೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು, ಸಂತ್ರಸ್ತರ ಜತೆ ಮಾತುಕತೆ ನಡೆಸಿದರು. ಅವರು ಭೇಟಿ ನೀಡಿದ್ದ ಮೂರು ಗ್ರಾಮಗಳಲ್ಲಿ ಒಂದೇ ಒಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗುವ ಕೆಲಸ ಮಾಡಲಿಲ್ಲ. ಕೇವಲ ಕಾಳಜಿ ಕೇಂದ್ರದಲ್ಲಿದ್ದ ಕೆಲ ಸಂತ್ರಸ್ತರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮಧ್ಯಾಹ್ನದಿಂದ ರಾತ್ರಿಯವರೆಗೂ ಕಾರಿನಲ್ಲಿಯೇ ಸುತ್ತಾಡಿದ ಶಶಿಕಲಾ ಜೊಲ್ಲೆ, ಮೊದಲು ಹೊಳೆ ಉಮಾರಾಣಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಜತೆ ಮಾತುಕತೆ ನಡೆಸಿದರು. ಅಲ್ಲಿಂದ ಅಗರಖೇಡ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅರ್ಧ ಗಂಟೆ ಅಲ್ಲಿನ ನಿವಾಸಿಗಳ ಜತೆ ಮಾತಾಡಿ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನೆರೆಯಿಂದ ಮನೆ ಕಳೆದುಕೊಂಡು ಬೀದಿಯಲ್ಲಿ ಬದುಕು ಸಾಗಿಸುತ್ತಿರುವವರ ಜತೆ ಒಂದು ಮಾತಾಡದೆ, ಕೇವಲ ಕಾಳಜಿ ಕೇಂದ್ರಕ್ಕೆ ಸಚಿವೆ ಭೇಟಿ ನೀಡಿರೋದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.