ವಿಜಯಪುರ :ಕೊರೊನಾ ನಿಯಂತ್ರಣಕ್ಕಾಗಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ಕುರಿತು ಎಲ್ಲರೂ ಮುನ್ನೆಚ್ಚರಿಕೆವಹಿಸಬೇಕು. ಐಎಲ್‌ಐ ಮತ್ತು ಸಾರಿ ಸಂಬಂಧಿತ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ತಿಳಿಸಿದರು. ಅಧಿಕಾರಿಗಳು ಕೂಡಾ ಇಂತಹ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಕಂಟೇನ್ಮೆಂಟ್ ವಲಯ ಸೇರಿ ಇತರ ಪ್ರದೇಶಗಳಲ್ಲಿ ತೀವ್ರ ನಿಗಾ ಇಡುವಂತೆ ತಿಳಿಸಿರುವ ಅವರು, ಐಎಲ್‌ಐ ಮತ್ತು ಸಾರಿ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಇಂತಹ ಲಕ್ಷಣವುಳ್ಳವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಜಿಲ್ಲಾ ಆಸ್ಪತ್ರೆ ವೈದ್ಯರೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು.
ಅದರಂತೆ ಕೊರೊನಾದಿಂದ ಆಗಬಹುದಾದ ಸಾವಿನ ಪ್ರಮಾಣವನ್ನು ಸಹ ಕಡಿಮೆಯಾಗುವಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರು ಕೃಷಿ ಇಲಾಖೆ, ಎಪಿಎಂಸಿ ಮತ್ತು ಇತರ ಅವಶ್ಯಕ ಇಲಾಖೆಗಳ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 317 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢವಾಗಿವೆ.
88 ಸ್ರಕಿಯ ಪ್ರಕರಣಗಳಿವೆ. ಈವರೆಗೆ 26,612 ಜನರ ಗಂಟಲು ದ್ರವ ಮಾದರಿ ನೆಗೆಟಿವ್ ಬಂದಿದ್ದು, 26,989 ಲಕ್ಷಣವುಳ್ಳ ಜನರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಗೆ ಸಂಗ್ರಹಿಸಲಾಗಿದೆ. 12,808 ಜನರು 28 ದಿನಗಳ ಐಸೋಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 21,097 ಜನರು 1 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 222 ಗುಣಮುಖ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿಲಾಗಿದೆ. 7 ಜನರು ಕೋವಿಡ್-19 ಪಾಸಿಟಿವ್ ರೋಗಿಗಳು ಮೃತಪಟ್ಟಿದ್ದು, 34,132 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ.