ವೈರಲ್ ವಿಡಿಯೋ ವಿಚಾರಕ್ಕೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯದಲ್ಲಿ ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡಬೇಕು. ನಾನು ಅದನ್ನು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಸತ್ಯಾಸತ್ಯತೆ ತಿಳಿದುಕೊಳ್ಳದೇ ಮಾತನಾಡುವುದಿಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ನಾನು ಹೇಳಿದ ಲಿಸ್ಟ್ ಮಾತ್ರ ಆಗಬೇಕು ಎಂದು ಸಿಎಂ ಪುತ್ರ ಯತೀಂದ್ರ ಮಾತನಾಡಿದ್ದಾರೆ ಎನ್ನಲಾದ ವೈರಲ್ ವಿಡಿಯೋ ವಿಚಾರಕ್ಕೆ ಗುರುವಾರ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈಗ ಅಂತಹ ವಿಡಿಯೋಗಳನ್ನು ಯಾರು, ಏನು ಬೇಕಾದರೂ ಮಾಡಬಹುದು. ನಿಮ್ಮದು (ಮಾಧ್ಯಮದವರದ್ದು) ಮಾಡಬಹುದು. ಈಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಂದಿದೆ. ಹಿಂದೆ ಮಹಾರಾಷ್ಟ್ರದ ಓರ್ವ ವ್ಯಕ್ತಿ ನನ್ನದೇ ಒಂದು ಮಿಮಿಕ್ರಿ ಮಾಡಿದ್ದ. ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಿಸಲಾಯಿತು. ಹಸಿರು ಇರೋ ನಿಮ್ಮ ಶರ್ಟ್ ಅನ್ನು ಕೆಂಪು ಮಾಡಬಹುದು. ಆರ್ಟಿಫಿಷಿಯಲ್ ಇಂಟಲಿಜೆನ್ಸ್(AI) ಬಂದಿದ್ದರಿಂದ ಯಾರು, ಏನು ಬೇಕಾದರೂ ಬದಲಾವಣೆ ಮಾಡಬಹುದು ಎಂದಿದ್ದಾರೆ.
ವಿಜಯಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದಿಂದ ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಬಂದು ಸಭೆ ಸಹ ನಡೆಸಿ ತೆರಳಿದ್ದಾರೆ. ಅದನ್ನು ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷರು ಮತ್ತು ಖರ್ಗೆ ಅವರ ಸಮ್ಮುಖದಲ್ಲಿ ಎಲ್ಲವೂ ನಿರ್ಣಯ ಆಗಲಿದೆ ಎಂದು ಸಚಿವರು ಹೇಳಿದರು.
ಬಿಎಸ್ವೈ ಚುನಾವಣೆಗೆ ಸೀಮಿತ: ಲೋಕಸಭಾ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇನು ಬಹಳ ದಿವಸ ಇರಲ್ಲ. ಮೂರು ವರ್ಷಕ್ಕೆ ಮಾತ್ರ ಅಂತ ಕೇಂದ್ರ ಸಚಿವರೇ ಹೇಳಿದ್ದಾರೆ. ಯಡಿಯೂರಪ್ಪನವರನ್ನು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು, ಯಾವಾಗ ಬೇಕಾದರೆ ಕೈಬಿಡಬಹುದು ಎಂಬ ಉದ್ದೇಶವಲ್ಲದೇ ಮತ್ತೇನು ಇಲ್ಲ. ವಿಜಯೇಂದ್ರರನ್ನು ಒಪ್ಪಿಕೊಳ್ಳುವುದು ಬಿಡುವುದು ಅವರ ಪಕ್ಷದ ಆಂತರಿಕ ವಿಚಾರ. ನಾನು ಆ ಬಗ್ಗೆ ಹೇಳಿಕೆ ನೀಡಲ್ಲ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಪಲ್ಲಕ್ಕಿ ಹೊತ್ತ ಸಚಿವರು:ಮಹಾರಾಷ್ಟ್ರದ ಪಂಢರಪುರ ಶ್ರೀ ವಿಠ್ಠಲ-ರುಕ್ಮಿಣಿ ದರ್ಶನಕ್ಕೆ ಹೊರಟಿರುವ ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದ ಕಾರ್ತಿಕ ಪಾದಯಾತ್ರೆಯ ದಿಂಡಿ ಉತ್ಸವದ ಯಾತ್ರಾರ್ಥಿಗಳ ತಂಡ ಸಚಿವ ಎಂ ಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು. ಈ ವೇಳೆ ಶ್ರೀ ಕ್ಷೇತ್ರ ಪಂಢರಪುರ-ಕರ್ನಾಟಕದ ಸೇವಾ ಮಂಡಳಿಯವರು ತಂದಿದ್ದ ಪಲ್ಲಕ್ಕಿಯನ್ನು ಸಚಿವರು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸೇವೆ ಸಲ್ಲಿಸಿದರು. ಈ ವೇಳೆ ಉಪಸ್ಥಿತರಿದ್ದ ಸಮಿತಿಯ ಮುಖ್ಯಸ್ಥ ಪುಂಡಲಿಕ ಮಹಾರಾಜರು ಸಚಿವರಿಗೆ ಇನ್ನೂ ಉನ್ನತ ಸ್ಥಾನ ಸಿಗಲೆಂದು ಶುಭ ಹಾರೈಸಿದರು. ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತರಿಗೆ ಸಚಿವರು ಶುಭಕೋರಿ ಬೀಳ್ಕೊಟ್ಟರು.
ಇದನ್ನೂ ಓದಿ:ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ಯತೀಂದ್ರನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ: ಡಿಸಿಎಂ ಡಿಕೆಶಿ