ವಿಜಯಪುರ:ವಿದ್ಯುತ್ ದರವನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿದ್ದಲ್ಲ ಸ್ವಾಯತ್ತ ಹೊಂದಿರುವಂತಹ ಕೆಇಆರ್ಸಿ ಈ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಸ್ಪಷ್ಟಪಡಿಸಿದರು.
ವಿದ್ಯುತ್ ದರ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ವಿದ್ಯುತ್ ದರ ನಮ್ಮ ಸರ್ಕಾರ ಬರುವ ಮೊದಲೇ ಹೆಚ್ಚಳವಾಗಿದೆ. ಹೀಗಾಗಿ ಬೆಲೆ ಏರಿಕೆಗೆ ನಮಗೆ ಯಾವುದೇ ಸಂಬಂದ ಇಲ್ಲ. ಅದನ್ನು ಹಿಂಪಡೆಯಲು ಆಗಲ್ಲ ಎಂದು ಈಗಾಗಲೇ ಮುಖ್ಯ ಮಂತ್ರಿಗಳು ಹೇಳಿದ್ದಾರೆ ಎಂದ್ರು.
ಆದ್ರೂ ಸಹ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ. ಕೈಗಾರಿಕೆಗಳು ಸೇರಿದಂತೆ ದಯವಿಟ್ಟು ಸಹಕಾರ ಮಾಡಿ ಎಂದು ವಿನಂತಿ ಮಾಡುತ್ತೇನೆ. ವಿದ್ಯುತ್ ದರ ಕೆಇಆರ್ಸಿ ಇಂದ ಆಗಾಗ ಏರಿಕೆ ಆಗ್ತಿರುತ್ತೆ. ಅದನ್ನು ಸರ್ಕಾರ ಮಾಡಬೇಕಾಗಿದ್ದಲ್ಲ. ಕೆಇಆರ್ಸಿ ಅವರು ಆಗಾಗ ಮಾಡ್ತಾರೆ. ಇವತ್ತು ದರ ಏರಿಕೆ ಮಾಡಿದ್ದಾರೆ. ಮುಂದೆ ಸಹ ಕಾಲಕಾಲಕ್ಕೆ ವಿದ್ಯುತ್ ದರ ಏರಿಕೆ ಮಾಡ್ತಾರೆ. ಎಲ್ಲರೂ ಸಹಕಾರ ಮಾಡಬೇಕು. ಸಿಎಂ ಹಾಗೂ ಇಂಧನ ಸಚಿವ ಜಾರ್ಜ್ ಜೊತೆ ಚರ್ಚೆ ಮಾಡಿ ಏನು ಪರಿಹಾರ ಮಾಡಲು ಸಾಧ್ಯವಿದೆ ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ:ಬಡವರು ತಿನ್ನುವಂತಹ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನಾವು ಪತ್ರ ಬರೆದಾಗ ಅವರು ಉತ್ತರ ಬರೆದರು. ಆದರೂ ಸಹಿತ ನಮ್ಮ ಸಿಎಂ ಮತ್ತೊಮ್ಮೆ ಕೇಳಿದರು. ಆಗ ಅವರು ಏಳು ಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಟನ್ ಅಕ್ಕಿ ಇದೆ ಎಂದು ಹೇಳಿದರು. ಅದಾದ ಮೇಲೆ ಇದು ರಾಜಕೀಯ ನಡೆದಿದೆ. ಹೀಗಾಗಿ ಬಡವರ ಅನ್ನದ ಜೊತೆ ರಾಜಕೀಯ ಮಾಡುವುದು ಸರಿಯಲ್ಲ ಎಂದರು.