ವಿಜಯಪುರ: ಆದಾಯ ತೆರಿಗೆ ಇಲಾಖೆ ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆದಾಗ ಬಿಜೆಪಿ ಐಟಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸುತ್ತಿದ್ದರು. ಈಗ ನಮ್ಮ ನಾಯಕರ ಆಪ್ತರ ಮೇಲೆ ದಾಳಿ ಮಾಡಿದಾಗ ಸುಮ್ಮನೆ ಏಕೆ ಇದ್ದಾರೆ? ಎಂದು ಸಚಿವ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ವೈ ಆಪ್ತನ ಮನೆ ಮೇಲಿನ ದಾಳಿ ಕುರಿತಂತೆ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿರುವುದು.. ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಇರುವುದು ವಿರೋಧ ಮಾಡಲು. ಅವರಿಂದ ಬಿಜೆಪಿ ಉತ್ತಮ ಕಾರ್ಯ ಮಾಡುತ್ತಿದೆ ಎಂಬ ಹೇಳಿಕೆ ನಿರೀಕ್ಷಿಸಲು ಸಾಧ್ಯವಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ರಾಜ್ಯದಲ್ಲಿ ತಾಲಿಬಾನ್ ಪರಿಸ್ಥಿತಿ ಇರುತ್ತಿತ್ತು : ಸಚಿವ ಶ್ರೀರಾಮುಲು
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಆಪ್ತರ ಮನೆ ಮೇಲೆ ದಾಳಿ ನಡೆದಿದೆ. ಇದೇ ಪ್ರತಿ ಪಕ್ಷಗಳು ತಮ್ಮ ಮನೆ ಮೇಲೆ ದಾಳಿ ನಡೆದಾಗ ಬಿಜೆಪಿ ಸರ್ಕಾರ ವಿರೋಧ ಪಕ್ಷದ ಮುಖಂಡರನ್ನು ಹುಡುಕಿ ಹುಡುಕಿ ಐಟಿ ಮೂಲಕ ದಾಳಿ ನಡೆಸುತ್ತದೆ ಎಂದು ಆರೋಪಿಸುತ್ತಿದ್ದವು.
ಈಗ ನಮ್ಮವರ ಮೇಲೆ ದಾಳಿ ನಡೆಸಿದಾಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಐಟಿ ಅಧಿಕಾರಿಗಳಿಗೆ ಅನುಮಾನ ಬಂದರೆ ಅಂತವರ ಮೇಲೆ ದಾಳಿ ನಡೆಸುತ್ತಾರೆ. ತಪ್ಪಿತಸ್ಥರಾದವರು ಶಿಕ್ಷೆ ಅನುಭವಿಸುತ್ತಾರೆ. ಅಲ್ಲದವರು ಹೊರಗೆ ಬರುತ್ತಾರೆ. ಇದರಲ್ಲಿ ರಾಜಕೀಯ ಬೆರೆಸುವುದು ಎಷ್ಟು ಸರಿ ಎಂದರು.