ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ದೇಶದ 130 ಕೋಟಿ ಜನರ ಜೀವಕ್ಕಿಂತ ಅವರ ಜೋಡೋ ಯಾತ್ರೆಯೇ ಮುಖ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.
ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ದೇಶದಲ್ಲಿ ಎಲ್ಲರೂ ಪಾಲಿಸಬೇಕಿದೆ. ಇಲ್ಲವಾದಲ್ಲಿ ಚೀನಾದಲ್ಲಿ ಉಂಟಾದ ಪರಿಸ್ಥಿತಿಯೇ ನಮ್ಮ ದೇಶದಲ್ಲೂ ಆಗಲಿದೆ. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಬಿಜೆಪಿ ಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಈ ಬಗ್ಗೆ ಹೇಳುವುದಾದರೆ ರಾಹುಲ್ ಗಾಂಧಿಯವರಿಗೆ ದೇಶದ 130ಕೋಟಿ ಜನರ ಜೀವಕ್ಕಿಂತ ಅವರ ಯಾತ್ರೆಯೇ ಮುಖ್ಯವಾಗಿದೆ. ಏಕೆಂದರೆ ಅವರೆಲ್ಲವನ್ನೂ ಕಳೆದುಕೊಂಡಿದ್ದಾರೆ. ಇನ್ನೇನು ಬಾಕಿ ಉಳಿದಿಲ್ಲ ಎಂದು ವ್ಯಂಗ್ಯವಾಡಿದರು.
ಏನಿದು ಕಾಂಗ್ರೆಸ್ ಆರೋಪ: ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿಯವರು ಹೆದರಿ ಕೋವಿಡ್ ನೆಪ ಒಡ್ಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇತ್ತೀಚೆಗೆ ಆರೋಪಿಸಿದ್ದರು. ಅಲ್ಲದೇ ಮೇಕೆದಾಟು ಪಾದಯಾತ್ರೆ ಮಾಡುವಾಗಲೂ ಬಿಜೆಪಿಯವರು ಕೋವಿಡ್ ನೆಪ ಒಡ್ಡಿದ್ದರು. ಇದೀಗ ಭಾರತ್ ಜೋಡೋ ಯಾತ್ರೆಗೂ ಅಡ್ಡಿಪಡಿಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದ್ದರು.
ಸಂಪುಟ ವಿಸ್ತರಣೆ ಸಿಎಂ ಕೈಯಲ್ಲಿಲ್ಲ: ಕೆ.ಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ದೆಹಲಿ ನಾಯಕರ ಜೊತೆ ನೇರ ಸಂಪರ್ಕ ಇದೆ. ಸಚಿವ ಸಂಪುಟ ವಿಸ್ತರಣೆ ಸಭೆಗೆ ನನ್ನನ್ನು ಆಹ್ವಾನಿಸಿದರೆ ನಾನು ಭಾಗವಹಿಸುವೆ ಎಂದ ಕಾರಜೋಳ ಸಚಿವ ಸಂಪುಟ ವಿಸ್ತರಣೆ ಸಿಎಂ ಕೈಯಲ್ಲಿ ಇಲ್ಲ ಎಂಬ ಪರೋಕ್ಷ ಸಂದೇಶ ನೀಡಿದರು.
ಬಿಜೆಪಿ ಸರ್ಕಾರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಅನಗತ್ಯವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಹಿರಿಯ ನಾಯಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ಹೈಕಮಾಂಡ್ ಮತ್ತು ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮುನ್ಸೂಚನೆ ನೀಡಿದ್ದರು. ಇದನ್ನರಿತ ಹೈಕಮಾಂಡ್, ಸಚಿವ ಸಂಪುಟ ವಿಸ್ತರಣೆಯತ್ತ ಗಮನ ಹರಿಸಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ದೆಹಲಿಗೆ ತೆರಳುವ ಸೂಚನೆ ಇದೆ.
ಕೆಂಪಣ್ಣ ಬಳಿ ದಾಖಲೆಯಿದ್ದರೆ ತನಿಖೆ ನಡೆಸುತ್ತೇವೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಯಾರದ್ದೋ ಮನೆಯಲ್ಲಿ ಕುಳಿತು ಅರ್ಜಿ ಬರೆದು ವಿನಾ ಕಾರಣ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅವರಲ್ಲಿ ದಾಖಲೆಗಳಿದ್ದರೆ ನಮಗೆ ನೀಡಲಿ. ತನಿಖೆ ನಡೆಸುತ್ತೇವೆ ಎಂದು ಇದೇ ವೇಳೆ ಸಚಿವ ಕಾರಜೋಳ ಸವಾಲೆಸೆದರು.
ಶನಿವಾರ ಕೆಂಪಣ್ಣ ಬಂಧನವಾದ ವಿಚಾರ ನನಗೆ ನೋವುಂಟು ಮಾಡಿದೆ. 90ರ ಇಳಿವಯಸ್ಸಿನಲ್ಲಿ ಜೈಲು ಸೇರಿದ್ದಾರೆ. ಕಳೆದ 15 ವರ್ಷಗಳಿಂದ ಗುತ್ತಿಗೆ ಕೆಲಸವನ್ನು ಬಿಟ್ಟಿರುವ ಇವರು ಇಂತಹ ಆರೋಪವನ್ನು ಹೇಗೆ ಮಾಡಿದರು? ಎಂದು ಪ್ರಶ್ನಿಸಿದರು. ಅಲ್ಲದೇ ಅವರು ಯಾವ ಗುತ್ತಿಗೆಗೆ ಶೇ.40ರಷ್ಟು ಕಮೀಷನ್ ನೀಡಿದ್ದಾರೆಂದು ಹೇಳಲಿ. ಗುತ್ತಿಗೆಯ ಶೇ.40 ರಷ್ಟು ಕಾಮಗಾರಿಗೆ, ಶೇ.25 ರಷ್ಟು ತೆರಿಗೆ ತುಂಬಬೇಕು. ಅಲ್ಲಿಗೆ ಶೇ.65 ರಷ್ಟಾಯಿತು. ಉಳಿದ ಶೇ.35ರಷ್ಟರಲ್ಲಿ ಶೇ.40ರಷ್ಟು ಕಮೀಷನ್ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದು ಸ್ಪಷ್ಟಪಡಿಸಿದರು.
ಏನಿದು ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಶೇ.40 ರಷ್ಟು ಭ್ರಷ್ಟಾಚಾರ ಆರೋಪ ಮಾಡಿದ್ದಲ್ಲದೆ, ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧವೂ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿ ನಾಲ್ವರನ್ನು ಕೇಂದ್ರ ವಿಭಾಗದ ವೈಯಾಲಿಕಾವಲ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಧ್ಯಕ್ಷ ಡಿ.ಕೆಂಪಣ್ಣ, ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಖಜಾಂಚಿ ನಟರಾಜ್ ಸೇರಿ ಇತರೆ ಆರೋಪಿಗಳು ಸಚಿವ ಮುನಿರತ್ನ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ್ದರು. ಅಲ್ಲದೇ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದರು.
ಇದನ್ನೂ ಓದಿ:ಸಂಪುಟ ವಿಸ್ತರಣೆಯತ್ತ ಹೈಕಮಾಂಡ್ ಚಿತ್ತ: ಆಕಾಂಕ್ಷಿತರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ