ಸುರಪುರ/ಯಾದಗಿರಿ:ಸುರಪುರ ನಗರದ ತಾಲೂಕು ಆಸ್ಪತ್ರೆಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಕೊರೊನಾ ಮೂರನೇ ಅಲೆಗಾಗಿ ಮಾಡಿಕೊಂಡಿರುವ ಪೂರ್ವ ತಯಾರಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಚಿವ ಬಿ.ಸಿ.ನಾಗೇಶ ಸುರಪುರ ಆಸ್ಪತ್ರೆಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ಮೂರನೇ ಅಲೆ ಬರುವುದಾಗಿ ಹೇಳಲಾಗುತ್ತಿದೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 650 ಬೆಡ್‍ಗಳ ತಯಾರಿ ಮಾಡಿಕೊಳ್ಳಲಾಗಿದೆ ಹಾಗೂ ಎಲ್ಲಿಯೂ ವೈದ್ಯರ ಕೊರತೆಯೂ ಇಲ್ಲ ಜೊತೆಗೆ ಆಕ್ಸಿಜನ್ ವ್ಯವಸ್ಥೆಯೂ ಕೂಡ ಇದೆ ಎಂದರು.
ಕೃಷ್ಣಾ ನದಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಮಾತನಾಡಿ, ಈಗಾಗಲೇ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಪ್ರವಾಹದ ಹಾನಿಯ ಕುರಿತು ಸರ್ವೆ ಮಾಡಿಸಲಾಗಿದೆ. ಈ ಬಾರಿ ಹಾನಿಗೊಳಗಾದ ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರಾಜುಗೌಡ ಮಾತನಾಡಿ, ಹಿಂದಿನ ಬಾರಿ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಎಲ್ಲಾ ರೈತರಿಗೆ ಪರಿಹಾರ ದೊರೆಯುವಲ್ಲಿ ತೊಂದರೆಯಾಗಿತ್ತು. ಆದರೆ ಈ ಬಾರಿ ಪ್ರವಾಹದಿಂದ ಬೆಳೆ ನಷ್ಟಕ್ಕೊಳಗಾದ ರೈತರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯಿತಿಯಲ್ಲಿ ಅಂಟಿಸಲಾಗುತ್ತದೆ. ವರದಿಯ ಪಟ್ಟಿಯಲ್ಲಿ ಹೆಸರು ಇಲ್ಲದ ರೈತರು ಕಚೇರಿಗೆ ತಿಳಿಸಿದಲ್ಲಿ ಅವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮ,ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮುಖಂಡರಾದ ಶಶೀಲ್ ನಮೋಶಿ, ರಾಜಾ ಹನುಮಪ್ಪ ನಾಯಕ (ತಾತಾ) ಸೇರಿದಂತೆ ಅನೇಕರಿದ್ದರು.